Friday, November 20, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಕಾರಂಜಿ ಸಹಕಾರಿ

ವಿದ್ಯಾರ್ಥಿಗಳಲ್ಲಿರುವ ಸುಪ್ತಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ.ಚಂದ್ರಕಾಂತಾ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಇನ್ವೆಂಚರ್ ಅಶೋಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಕಲಿಕಾ ಚೇತರಿಕೆ ವರ್ಷ-2022, ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.

ಸೋಲು-ಗೆಲುವು ಮುಖ್ಯ ಅಲ್ಲ, ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳುವ ಕೌಶಲ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪ್ರಪಂಚಕ್ಕೆ ಪರಿಚಯಿಸಲು ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದರು.

ಇನ್ವೆಂಚರ್ ಅಶೋಕ ಶಾಲೆ ಪ್ರಾಂಶುಪಾಲೆ ಎಸ್.ಶ್ರುತಿ ಮಾತನಾಡಿ, ಶಾಲೆ ಅಧ್ಯಕ್ಷ ಅಶೋಕ್‌ ಜಯರಾಂ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ಆಯೋಜಿಸಿದ್ದೇವೆ, 40 ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಛದ್ಮವೇಷ, ಕನ್ನಡ ಮತ್ತು ಇಂಗ್ಲೀಷ್ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ ಮತ್ತು ಭಕ್ತಿಗೀತೆ, ಅಭಿನಯಗೀತೆ, ಕಥೆ ಹೇಳುವುದು, ಚಿತ್ರಕಲೆ, ಹಾಸ್ಯ, ಭಾಷಣ, ಕ್ಲೇ ಮಾಡಲಿಂಗ್, ಕ್ವಿಜ್, ಚರ್ಚಾಸ್ಪರ್ಧೆ, ಜಾನಪದ-ಭಾವಗೀತೆ, ರಂಗೋಲಿ, ಕವ್ವಾಲಿ, ಭರತನಾಟ್ಯ-ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ್, ಅರಕೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಾರದ ರಮೇಶ್‌ರಾಜು, ಮುಖ್ಯ ಶಿಕ್ಷಕಿ ಲಿಖಿತಾ, ಶಿಕ್ಷಣ ಸಂಯೋಜಕ ಮಧುಸೂದನ, ಶಿಕ್ಷಕರಾದ ದೇವರಾಜು, ಸುರೇಖಾ, ದಕ್ಷ, ಭರತ್‌ಆರಾಧ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ