-
159 ಗ್ರಾಮಗಳ ಪ್ರತಿ ಮನೆಗಳಿಗೆ 20 ಲೀಟರ್ ನೀರು ಸಂಗ್ರಹಣೆ ಸಾಮರ್ಥ್ಯದ ಕ್ಯಾನ್ ಗಳ ವಿತರಣೆ
- ಗುರುವಾರ ಮಾತ್ರ ಗರ್ಭಿಣಿಯರ ಸ್ಕ್ಯಾನಿಂಗ್ ಅನ್ನು ಕೇವಲ 300 ರೂ.ಗೆ ತಪಾಸಣೆ
ನಾನು ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಕಾಂಗ್ರೆಸ್ ಮುಖಂಡ ಡಾ.ಹೆಚ್.ಕೃಷ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಜನರ ಸೇವೆ ಮಾಡುತ್ತಿದ್ದೇನೆ, ಆದರೆ ಪಕ್ಷದ ಯಾರಿಗೆ ಟಿಕೆಟ್ ನೀಡಿದರೂ ಅವರೊಂದಿಗೆ ಕೈಜೋಡಿಸುತ್ತೇನೆ,
ರಾಜಕೀಯ ಹೊರತಾಗಿ ನನ್ನ ಜನ ಸೇವೆಯೂ ನಿರಂತರವಾಗಿರುತ್ತದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಇಂತಹ ಪ್ರಚಾರದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಚಾರಕ್ಕಾಗಿ ಜನಸೇವೆ ಮಾಡುತ್ತಿಲ್ಲ, ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ ಎಂದರು.
ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ 24 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 159 ಗ್ರಾಮಗಳ ಪ್ರತಿ ಮನೆಗಳಿಗೆ 20 ಲೀಟರ್ ನೀರು ಸಂಗ್ರಹಣೆ ಸಾಮರ್ಥ್ಯದ ಕ್ಯಾನ್ ಗಳನ್ನು ವಿತರಣೆ ಮಾಡಲಾಗುವುದು, ಈ ಕಾರ್ಯಕ್ರಮಕ್ಕೆ ಮಂಡ್ಯ ತಾಲ್ಲೂಕಿನ ಉಪ್ಪಕರಕನಹಳ್ಳಿಯಲ್ಲಿ ಭಾನುವಾರ ಚಾಲನೆ ನೀಡಲಾಗುವುದು ಎಂದರು.
ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಎಷ್ಟೋ ಮನೆಗಳಲ್ಲಿ ಕುಡಿಯುವ ನೀರಿನ ಕ್ಯಾನ್ ಗಳ ಕೊರತೆ ಇದೆ, ಇದನ್ನು ಮನಗೊಂಡು ಈ ಕಾರ್ಯ ಕೈಗೆತ್ತಿಗೊಂಡಿರುವುದಾಗಿ ತಿಳಿಸಿದರು.
ಗರ್ಭಿಣಿ ಸ್ತ್ರೀಯರಿಗೆ ಉಚಿತ ತಪಾಸಣೆ
ಪ್ರತಿ ಗುರುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಂಡ್ಯ ನಗರದ ಕಾವೇರಿ ನರ್ಸಿಂಗ್ ಹೋಂನಲ್ಲಿ ಗರ್ಭಿಣಿ ಸ್ತ್ರೀಯರಿಗೆ ಉಚಿತ ತಪಾಸಣೆ ಮಾಡಲಾಗುವುದು.
ಗುರುವಾರ ಮಾತ್ರ ಗರ್ಭಿಣಿಯರ ಸ್ಕ್ಯಾನಿಂಗ್ ಅನ್ನು ಕೇವಲ 300 ರೂ. ವೆಚ್ಚದಲ್ಲಿ ಮಾಡಿಕೊಡಲಾಗುವುದು, ಮಂಡ್ಯ ವಿಧಾನಸಭಾ ಕ್ಷೇತ್ರವಲ್ಲದೆ, ಎಲ್ಲರೂ ಇದರ ಪ್ರಯೋಜನ ಪಡೆಯಬಹುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಅಮ್ಜದ್ ಪಾಷ, ಮುರುಳಿ ಹಾಗೂ ಸೋಮು ಉಪಸ್ಥಿತರಿದ್ದರು.




