ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ನಿರ್ದಿಷ್ಟ ಗುರಿ ಇಟ್ಟುಕೊಂಡರೆ ಮಾತ್ರ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ. ಗುರಿ ಇಲ್ಲದಿದ್ದರೆ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಮೈತ್ರಿ ಮೆಟಲೈಸಿಂಗ್ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ, ಉದ್ಯಮಿ ದೊಡ್ಡೇಗೌಡನಕೊಪ್ಪಲಿನ ಮಧುಸೂದನ್ ಕಿವಿಮಾತು ಹೇಳಿದರು.
ಶ್ರೀರಂಗಪಟ್ಟಣದ ಗುರುಭವನದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದಕ್ಕೆ ಭಯಪಡುತ್ತಾರೆ. ಕನ್ನಡ ಭಾಷೆಯ ವರ್ಣಮಾಲೆಗಿಂತ ಇಂಗ್ಲಿಷ್ ಭಾಷೆಯಲ್ಲಿ ಅಕ್ಷರಗಳು ಕಡಿಮೆಯಿದ್ದು ಸುಲಭವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಯಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಸಂಸ್ಥೆ ವತಿಯಿಂದ ಕೈಗೊಂಡಿದ್ದು ಸ್ವಗ್ರಾಮ ದೊಡ್ಡೇಗೌಡನಕೊಪ್ಪಲಿನ ಸರ್ಕಾರಿ ಶಾಲೆಯನ್ನು ತಮ್ಮ ಸಂಸ್ಥೆಗೆ ದತ್ತು ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಅವರಿಗೆ ಮನವಿ ಮಾಡಿದರು.
ನಿವೃತ್ತ ಶಿಕ್ಷಕ ಸಣ್ಣಸ್ವಾಮೀಗೌಡ, ಶಿಕ್ಷಣ ಸಂಯೋಜಕಿ ಡಾ ಪ್ರತಿಮಾ, ಸರ್ಕಾರಿ ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ಕೂಡಲಕುಪ್ಪೆ ಸೋಮಶೇಖರ್, ರೈತ ಹೋರಾಟಗಾರ ಕ್ಯಾತನಹಳ್ಳಿ ತುಳಸಿಗೌಡ ಶಾಲೆಯ ಮುಖ್ಯ ಶಿಕ್ಷಕಿ ಜಸ್ಸಿಂತ, ಶಿಕ್ಷಕ ಪ್ರಕಾಶ್ ರವೀಂದ್ರ, ಗೀತಾ, ಅತಿಥಿ ಶಿಕ್ಷಕಿ ಕಾಂಚನ ಸೇರಿದಂತೆ ಇತರರು ಹಾಜರಿದ್ದರು.




