Thursday, November 19, 2026

ಪ್ರಾಯೋಗಿಕ ಆವೃತ್ತಿ

ಚನ್ನರಾಯಪಟ್ಟಣ | ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಶಿಷ್ಯ ಮಾಸ್ತಿಗೌಡನ ಬರ್ಬರ ಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್‌ ರೌಡಿಶೀಟರ್ ಹಾಗೂ ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಗಡಿಪಾರಾಗಿ ಸದ್ಯ ಕಲಬುರಗಿ ಜೈಲಿನಲ್ಲಿರುವ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯ ಮಾಸ್ತಿಗೌಡ ಅಲಿಯಾಸ್ ಕೃಷ್ಣ(30)ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಚನ್ನರಾಯಪಟ್ಟಣ ಪಟ್ಟಣದ ಬಿಎಂ ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗ ಹಾಡಹಗಲೇ ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವ ಭಯಾನಕ ಕೃತ್ಯ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ ನಾಲೈದು ಯುವಕರು, ಕೃಷ್ಣನನ್ನು ಬೆನ್ನಟ್ಟಿದ್ದಾರೆ. ಆತ ಓಡಲು ಆರ೦ಭಿಸುತ್ತಿದ್ದಂತೆಯೇ ನಡುರಸ್ತೆಯಲ್ಲಿ ಕೃಷ್ಣನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮನಬಂದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಾಸ್ತಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಟ್ಟಣದಲ್ಲಿ ಆಗಾಗ್ಗೆ ರೌಡಿ ಶೀಟರ್‌ಗಳ ಹೊಡೆದಾಟ, ಬಡಿದಾಟ ಮರುಕಳಿಸುತ್ತಿರುವುದರಿಂದ ಚನ್ನರಾಯಪಟ್ಟಣ ಜನತೆ ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್‌, ನಗರ ಠಾಣೆ ಇನ್ಸ್‌ಪೆಕ್ಟರ್ ಕೆ.ಎಂ. ವಸಂತ್, ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಿನ್ನೆಲೆ 

ಈ ಹಿಂದೆ ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಸ್ತಿಗೌಡ ಒಂದು ಕಾಲದಲ್ಲಿ ಕುಖ್ಯಾತ ರೌಡಿಶೀಟರ್ ಯಾಚೇನಹಳ್ಳಿ ಚೇತು ಶಿಷ್ಯನಾಗಿದ್ದ. ನಂತರದಲ್ಲಿ ಸಣ್ಣಪುಟ್ಟ ಮನಸ್ತಾಪದಿಂದ ಗುರು-ಶಿಷ್ಯರ ನಡುವೆ ವೈಷಮ್ಯ ಮೂಡಿ, ಇಬ್ಬರೂ ಬೇರೆಯಾಗಿ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು.

ಈ ನಡುವೆ ಚನ್ನರಾಯಪಟ್ಟಣದವನೇ ಆದ ಮತ್ತೊಬ್ಬ ರೌಡಿಶೀಟರ್ ಬಾಂದು ಕಿರ ಎಂಬಾತನನ್ನು ಚೇತು ಅಪಹರಣ ಮಾಡಿ, 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದಾದ ಬಳಿಕ ಮತ್ತೆ ಯಾಚೇನಹಳ್ಳಿ ಚೇತು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ.

ಇದಾದ ಬಳಿಕ ಬಾಂದು ಕಿರಣ್, ಮಾಸ್ತಿಗೌಡನ ಮೊರೆ ಹೋಗಿ, ಹೇಗಾದರೂ ಮಾಡಿ ಚೇತುನನ್ನು ಮುಗಿಸಬೇಕು ಎಂದು ಬಾಂದು ಕಿರಣ್‌ ಮತ್ತು ಮಾಸ್ತಿಗೌಡ ಅಂಡ್ ಗ್ಯಾಂಗ್ ಸ್ಕೆಚ್ ಹಾಕಿತ್ತು. ಒಂದ ದಿನ ಚನ್ನರಾಯಪಟ್ಟಣದ ಹೊರ ವಲಯದಲ್ಲಿ ಯಾಚೇನಹಳ್ಳಿಯಿಂದ ಬರುತ್ತಿದ್ದ ಚೇತು ಮೇಲೆ ಗ್ಯಾಂಗ್ ಫೈರಿಂಗ್ ಮಾಡಿತ್ತು, ಆದರೆ ಚೇತು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಬಚಾವಾಗಿದ್ದ. ಆಗಿನಿಂದಲೂ ಇಬ್ಬರ ನಡುವೆ ಹಗೆ ಮುಂದುವರಿದೇ ಇತ್ತು. ನಂತರದಲ್ಲೂ ಚೇತು ಕೊಲೆ, ಕೊಲೆ ಯತ್ನ ಸುಲಿಗೆ ಮೊದಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರಿಂದ ಈತನನ್ನು ಇತ್ತೀಚೆಗೆ ಮತ್ತೊಂದು ವರ್ಷ ಗಡಿಪಾರು ಮಾಡಿ, ದೂರದ ಕಲಬುರಗಿ ಜೈಲಿಗೆ ಕಳಿಸಲಾಗಿದೆ.

ಇದಕ್ಕೂ ಮುನ್ನ ಒಂದು ವರ್ಷದ ಹಿಂದೆ ನಟೋರಿಯಸ್‌ ರೌಡಿಶೀಟರ್ ಚೇತನ್ ಮೇಲೆ ಇಂದು ಕೊಲೆಯಾಗಿರುವ ಮಾಸ್ತಿಗೌಡ ಫೈರಿಂಗ್ ಮಾಡಿದ್ದ. ಇದೀಗ ತಂಡವೊಂದು ಸ್ಕೆಚ್ ಹಾಗಿ ಮಾಸ್ತಿಗೌಡನನ್ನೆ ಮುಗಿಸಿದೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ ಮತ್ತೊಮ್ಮೆ ರೌಡಿ ಪಟಾಲಂ ಮಚ್ಚುಲಾಂಗು ಝಳಪಿಸಿದ್ದು, ಜನರು ಸಹಜವಾಗಿಯೇ ಭಯಭೀತರಾಗಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ