ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಎನ್ನುವ ಪೋಸ್ಟರ್ ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.ಜಿಲ್ಲೆಯನ್ನು ದಾಟಿ ರಾಜ್ಯದ್ಯಂತ ಈ ಬ್ರಹ್ಮಚಾರಿಗಳ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ.ಹೆಣ್ಣು ಹೆತ್ತವರು ಸರ್ಕಾರಿ ಕೆಲಸ,ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ,ಕಾರ್ಪೊರೇಟ್ ಕಂಪನಿಯಲ್ಲಿದ್ದು, ಕೈತುಂಬಾ ಸಂಬಳ ತರುವ ಯುವಕರಿಗೆ ಮಾತ್ರ ಹೆಣ್ಣು ಕೊಡುವ ಕೆಟ್ಟ ಚಾಳಿ ಶುರುವಾಗಿದೆ.ಎಲ್ಲಾ ಯುವಕರು ಕೈ ತುಂಬಾ ಸಂಬಳ ಸಿಗುವ ವೃತ್ತಿ ಮಾಡಲು ಸಾಧ್ಯವೇ? ಅದರಲ್ಲೂ ವ್ಯವಸಾಯ ಮಾಡಿಕೊಂಡು ಆರ್ಥಿಕವಾಗಿಯೂ ಯಾವ ತೊಂದರೆಯೂ ಇಲ್ಲದ ಯುವಕರಿಗೂ ಹೆಣ್ಣು ಕೊಡುತ್ತಿಲ್ಲ.
ಹಳ್ಳಿಗೆ ಹೆಣ್ಣು ಕೊಡಲ್ಲ,ನನ್ನ ಮಗಳು ಅಲ್ಲಿ ಹೋಗಿ ಕೆಲಸ ಮಾಡಬೇಕಾ ಎನ್ನುವ ಮನೋಭಾವ ಹೆಣ್ಣು ಹೆತ್ತವರಲ್ಲಿ ಬೆಳೆದು ಬಿಟ್ಟಿದೆ.ಸಿಟಿಯ ಮೋಹಕ್ಕೆ ಒಳಗಾಗಿರುವ ಹಳ್ಳಿಯ ಹೆಣ್ಣು ಮಕ್ಕಳು ಹಳ್ಳಿಗೆ ಮದುವೆ ಆಗಿ ಹೋಗಲು ಬಿಲ್ ಕುಲ್ ಒಪ್ಪುತ್ತಿಲ್ಲ.ಹಾಗಾಗಿ ಪ್ರತಿ ಗ್ರಾಮಗಳಲ್ಲಿ 35-40 ವಯಸ್ಸು ದಾಟಿರುವ ಯುವಕರ ಸಂಖ್ಯೆ 30-40ರಷ್ಟಿದೆ.
ಹಾಗಾಗಿ ಮದುವೆಯಾಗದೆ ಇರುವ ಯುವಕರು ಮಾನಸಿಕವಾಗಿ ಕುಗ್ಗದಿರಲು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.ಬ್ರಹ್ಮಚಾರಿಗಳ ನಡೆ, ಮಹದೇಶ್ವರ ಬೆಟ್ಟದ ಕಡೆ ಹೆಸರಿನಲ್ಲಿ ವಿಶಿಷ್ಟವಾದ ಪಾದಯಾತ್ರೆ ಆಯೋಜಿಸಲಾಗಿದೆ.
ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ 122 ಕಿ.ಮೀ ಪಾದಯಾತ್ರೆ ಮಾಡುವುದಾಗಿ ಮದುವೆಯಾಗದ ಈ ಭಾಗದ ಯುವಕರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಮಳವಳ್ಳಿ-ಕೊಳ್ಳೆಗಾಲ-ಹನೂರು ಮಾರ್ಗವಾಗಿ ಪ್ರಯಾಣ ಸಾಗಲಿದೆ. ಇನ್ನು ಪಾದಯಾತ್ರೆಗೆ ಬರುವವರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಕಡ್ಡಾಯವಾಗಿ 30 ವರ್ಷ(ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವಂತೆ) ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ(ನಿಶ್ಚಿತಾರ್ಥ ಆಗಿದ್ದವರಿಗೂ ನಿಷೇಧ) ಎಂದು ಸೂಚನೆ ನೀಡಲಾಗಿದೆ. ಇದಲ್ಲದೆ ಪ್ರತಿ 5 ಕಿ.ಮೀಗೆ ಚಹಾ ವಿರಾಮ ಹಾಗೂ ಪ್ರತಿ 10 ಕಿ.ಮೀಗೆ ಸ್ನ್ಯಾಕ್ಸ್ ವ್ಯವಸ್ಥೆ ಇರಲಿದೆ.ರಾತ್ರಿ ಒಂದು ಗಂಟೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಾದಯಾತ್ರೆ ಹೊರಡುವ ದಿನಾಂಕ ಮತ್ತು ರೂಪುರೇಷೆಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ.
ಇನ್ನೂ ಮದುವೆಯಾಗದೆ ಅದೇ ಕೊರಗಿನಲ್ಲಿರುವ ಯುವಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿ ಎಂಬುದು ಆಯೋಜಕರ ಮಾತು.




