Saturday, November 21, 2026

ಪ್ರಾಯೋಗಿಕ ಆವೃತ್ತಿ

ಕಬ್ಬಿಗೆ ಸೂಕ್ತ ಬೆಲೆ ನೀಡದಿದ್ದರೆ ದಸರಾಗೆ ಅಡ್ಡಿ


  • ಟನ್ ಕಬ್ಬಿಗೆ 4500 ರೂ. ನಿಗದಿಪಡಿಸಲು ಒತ್ತಾಯ

  • ಕನ್ನಂಬಾಡಿ ಸುತ್ತಮುತ್ತ ಶಾಶ್ವತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ರೈತರು ಬೆಳೆದ ಟನ್ ಕಬ್ಬಿಗೆ 4500 ರೂ. ನಿಗಧಿ ಮಾಡದಿದ್ದರೆ ವಿಶ್ವವಿಖ್ಯಾತ  ಮೈಸೂರು ದಸರಾ ಕಾರ್ಯಕ್ರಮಕ್ಕೆ ತೆರಳದಂತೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಲಾಗುವುದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಎಚ್ಚರಿಕೆ ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಟನ್ ಕಬ್ಬಿಗೆ 3050 ರೂ.ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಪ್ರಸ್ತುತ ರಸಗೊಬ್ಬರ, ಕೀಟನಾಶಕ, ಸಾಗಾಣಿಕ ವೆಚ್ಚದ ಬೆಲೆ ಪ್ರತಿವರ್ಷವು ಜಾಸ್ತಿಯಾಗುತ್ತಲೆ ಇದೆ, ಆದರೆ ಕಬ್ಬಿನ ಬೆಲೆಯನ್ನು ಮಾತ್ರ ಹೆಚ್ಚು ಮಾಡುತ್ತಿಲ್ಲ ಎಂದು ದೂರಿದರು.

ಮಂಡ್ಯ ಜಿಲ್ಲೆಯ ರೈತರ ಟನ್ ಕಬ್ಬಿಗೆ 2700 ರೂ. ಮಾತ್ರ ದೊರೆಯುತ್ತಿದೆ, ಈ ಅನ್ಯಾಯದ ಬೆಲೆಯಿಂದಾಗಿ ರೈತರು ಕಬ್ಬು ಬೆಳೆಯುವುದನ್ನೆ ಕೈ ಬಿಡುವಂತಾಗಿದೆ, ಆದ್ದರಿಂದ ದಸರಾದೊಳಗೆ ರಾಜ್ಯ ಸರ್ಕಾರ ಟನ್ ಕಬ್ಬಿಗೆ 4500 ರೂ.ನಿಗದಿ ಮಾಡಬೇಕು, ಇಲ್ಲವಾದರೆ ದಸರಾ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಶ್ವತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ಕೆಆರ್ ಎಸ್ ಜಲಾಶಯದ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಬೇಕೆಂದು ಆಗ್ರಹಿಸಿದ ಅವರು, ಈಗಾಗಲೇ ತಜ್ಞರ ವೈಜ್ಞಾನಿಕ ವರದಿಯು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂದು ವರದಿ ನೀಡಿದೆ, ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗದೇ ಗಣಿಗಾರಿಕೆ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಬೃಹತ್ ರೈತ ಸಮಾವೇಶ

ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸೆ.19ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ರೈತರ ಸಮಾವೇಶ ಆಯೋಜಿಸಲಾಗಿದೆ ಎಂದರು.

ಸಮಾವೇಶವನ್ನು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಉದ್ಘಾಟಿಸುವರು. ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಫೂಗೌಡ ಅಧ್ಯಕ್ಷತೆ ವಹಿಸುವರು. ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ದಿಕ್ಸೂಚಿ ಭಾಷಣ ಮಾಡುವರು ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ರಾಜಮಾತೆ ಪ್ರಮೋದದೇವಿ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ದಸಂಸ ಮುಖಂಡ ಕೆರಗೋಡು ಗುರುಪ್ರಸಾದ್, ಭೂಗರ್ಭ ವಿಜ್ಞಾನಿ ಡಾ.ಹೆಚ್.ಟಿ.ಬಸವರಾಜಪ್ಪ, ಆರ್.ಟಿ.ಐ ರವೀಂದ್ರ ಭಾಗವಹಿಸುವರು ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಚಾಮರಸಮಾಲಿ ಪಾಟೀಲ್, ನಂದಿನಿ ಜಯರಾಮ್, ನಾಗರತ್ನ ವಿ.ಪಾಟೀಲ್, ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು ಹಾಗೂ ದರ್ಶನ್ ಪುಟ್ಟಣ್ಣಯ್ಯ ಭಾಗಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಸ್.ಬಾಲಚಂದ್ರು, ಜಿ.ಎಸ್.ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ಮಧುಚಂದನ್, ತಗ್ಗಹಳ್ಳಿ ಪ್ರಸನ್ನ, ಶಿವಳ್ಳಿ ಚಂದ್ರು ಹಾಗೂ ವಿಜಯ್ ಕುಮಾರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ