Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ವಸಂತ ಕವಿಗೋಷ್ಠಿ: ಅಕ್ಷರ ಹೊಸ ಕಾವ್ಯ

ಚಳಿಗಾಲ ಮತ್ತು ಬೇಸಿಗೆ ಕಾಲಗಳ ನಡುವೆ ಬರುವ ವಸಂತಕಾಲ ಪ್ರಕೃತಿಯಲ್ಲಿ ನವೋಲ್ಲಾಸವನ್ನು ತರುತ್ತದೆ. ಎಲೆಗಳೆಲ್ಲ ಉದುರಿ ಹೊಸ ಚಿಗುರು ಹೊಸ ಮನ್ವಂತರದೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ.

ಕುವೆಂಪು ಪರಂಪರೆಯ ಮುಂದುವರಿಕೆ

“ವಸಂತವನದಲ್ಲಿ ಕೂಗುವ ಕೋಗಿಲೆಗೆ ಅರಸುಗಿರಸುಗಳ ಹಂಗಿಲ್ಲ ಎಂದು ಹೇಳಿದ ವಿಶ್ವಮಾನವ ಕುವೆಂಪು ಅವರು ರಾಮಾಯಣ ದರ್ಶನಂನಂಥ ಮಹಾಕಾವ್ಯ ರಚಿಸುವುದರ ಜತೆಗೆ ಶ್ರೀಸಾಮಾನ್ಯನಿಗೆ ದನಿಯಾಗುವ ಕವಿತೆಗಳನ್ನು ರಚಿಸಿದರು. ಕವಿಯ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದರು. ಈ ಪರಂಪರೆ ಮುಂದುವರಿಸಲು, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಲು ‘ಅಕ್ಷರ ಹೊಸ ಕಾವ್ಯ’ ವಸಂತ ಕವಿಗೋಷ್ಠಿ ಆಯೋಜಿಸಲಾಗಿದೆ. ಹೊಸ ಕವಿತೆಗಳು ಮಂಡ್ಯ ನೆಲಕ್ಕೆ ಹೊಸ ಅಯಾಮ ನೀಡಲಿ ಎಂದು ಆಶಿಸುತ್ತೇನೆ.”


~ವಿನಯ್ ಕುಮಾರ್ ಎಂ.

ಅಧ್ಯಕ್ಷರು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್

ವಸಂತಕಾಲಕ್ಕೂ ಕಾವ್ಯರಚನೆಗೂ ಅವಿನಾಭಾವ ಸಂಬಂಧವಿದೆ. ವರ್ತಮಾನದ ತಲ್ಲಣಗಳಿಗೆ ದನಿಯಾಗುತ್ತ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಕವಿಯಷ್ಟೇ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸಕ್ಕರೆ ನಾಡು ಮಂಡ್ಯದ ಗಾಂಧಿಭವನದಲ್ಲಿ ಇದೇ ತಿಂಗಳ 25ರ ಸಂಜೆ ಪಿ.ಲಂಕೇಶರ ಆಶಯದಂತೆ ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯನ್ನು ಪರಿಚಯ ಪ್ರಕಾಶನ ಆಯೋಜಿಸುತ್ತಿದೆ.

ಕನ್ನಡ ಶಾಲೆಗಳ ಉಳಿವಿಗೆ ದನಿಯಾಗಲಿ..

“ಹಿಂದೆ ಲಂಕೇಶರ ಕಾಲದಲ್ಲಿ ಅಡಿಗ, ಬಿ.ಆರ್.ಲಕ್ಷ್ಮಣರಾವ್, ಚನ್ನವೀರ ಕಣವಿ, ಜಯಂತ ಕಾಯ್ಕಿಣಿ, ವೈದೇಹಿ, ಚಂಪಾ ಎಲ್ಲರೂ ಒಟ್ಟುಗೂಡಿ “ಅಕ್ಷರ ಹೊಸ ಕಾವ್ಯ”ಕ್ಕೆ ಮುನ್ನುಡಿ ಬರೆದಿದ್ದರು. ಈಗ ಜನಸಾಮಾನ್ಯರು, ರೈತರು ಮತ್ತು ಬಡಜನರ ಮಕ್ಕಳು ಓದುವ ಸರ್ಕಾರಿ ಶಾಲೆ ಸಂಕಷ್ಟಗಳ ಥೀಮ್ ಇಟ್ಟುಕೊಂಡು ಪರಿಚಯ ಪ್ರಕಾಶನ ವಸಂತ ಕವಿಗೋಷ್ಠಿ ಆಯೋಜಿಸಿದೆ. ಜವಾಬ್ದಾರಿಯುತ ಕನ್ನಡ ಭಾಷಾಪ್ರೇಮಿಯಾಗಿ ನಾನು ಈ ಪ್ರಯತ್ನದ ಭಾಗವಾಗಿದ್ದೇನೆ ಅಷ್ಟೇ..”

~ಕೆ.ಟಿ.ಹನುಮಂತು

ಕನ್ನಡ ಪರಿಚಾರಕರು, ಮಂಡ್ಯ

ಅಕ್ಷರ ಹೊಸ ಕಾವ್ಯ ~ ವಸಂತ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ಮೊ.9916894417, 6363116828 ಗಳಿಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದು.

ಅಕ್ಷರ ಹೊಸ ಕಾವ್ಯ ಇವತ್ತಿನ ಅಗತ್ಯ..

ಕವಿಯ ಕಣ್ಣು ವಿಶೇಷವಾದದ್ದು. ತನ್ನ ಸುತ್ತಮುತ್ತಲ ತಲ್ಲಣಗಳನ್ನು, ಸಂಕಟಗಳನ್ನು, ತಾನು ಕಂಡುಕೊಂಡ ವರ್ತಮಾನದ ಸಂಘರ್ಷಗಳನ್ನು ಕವಿತೆಯ ಮೂಲಕ ಕಾವ್ಯದ ಪರಿಧಿಯನ್ನು ವಿಸ್ತರಿಸಿಕೊಂಡು ಹಂಚಬಹುದು. ಕವಿಗೆ ಆ ಎಲ್ಲಾ ಸ್ವಾತಂತ್ರ್ಯವೂ ಇದೆ. ಬದುಕಿನ ಸಂತೋಷದ ಕ್ಷಣಗಳನ್ನು ಸೆರೆಹಿಡಿಯುವ ಕವಿ, ಅಷ್ಟೇ ಅಗತ್ಯವಾಗಿ ಪರಿಣಾಮಕಾರಿಯಾಗಿ ಸಮಾಜದ ಓರೆ ಕೋರೆಗಳನ್ನು ತನ್ನ ಕಾವ್ಯದ ಮಾತುಗಳಿಂದ ಜನಮಾನಸಕ್ಕೆ ತಲುಪಿಸಬೇಕಾಗುತ್ತದೆ. ಅದರ ಅನಿವಾರ್ಯತೆ ಇದೆ. ಹಾಗಾಗಿಯೇ ಈ ಪ್ರಯತ್ನ ಅಕ್ಷರ ಹೊಸ ಕಾವ್ಯ.. ಈ ಹೊಸತನದ ಕವಿಗೋಷ್ಠಿಯಲ್ಲಿ ನಾನು ಇರಲಿದ್ದೇನೆ. ನೀವೂ ಬನ್ನಿ.

~ಭವಾನಿ ಲೋಕೇಶ್
ಕವಯತ್ರಿ

ಹೊಸ ಕವಿಗಳ ಶೋಧನೆಯಾಗಲಿ..

70ರ ದಶಕದಲ್ಲಿ ಕನ್ನಡನಾಡಿನಾದ್ಯಂತ ಸಂಚಲನ‌ ಮೂಡಿಸಿದ್ದ ಲಂಕೇಶರ “ಅಕ್ಷರ ಹೊಸ ಕಾವ್ಯ” ಇದೀಗ ಮತ್ತೊಮ್ಮೆ ಮಂಡ್ಯದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ನವ್ಯಕಾವ್ಯಕ್ಕೆ ದೊಡ್ಡ ತಿರುವು ಕೊಟ್ಟ ಅಕ್ಷರ ಹೊಸ ಕಾವ್ಯ ಐದು ದಶಕಗಳ ನಂತರವೂ ಜೀವಂತವಾಗಿದೆ ಎಂಬುದಕ್ಕೆ ಪರಿಚಯ ಪ್ರಕಾಶನ ಆಯೋಜಿಸುತ್ತಿರುವ ವಸಂತ ಕವಿಗೋಷ್ಠಿಯೇ ಸಾಕ್ಷಿ. ಹೊಸತಲೆಮಾರಿನ ಕವಿಗಳು ಈ ವೇದಿಕೆಯ ಮೂಲಕ ವರ್ತಮಾನಕ್ಕೆ ಕನ್ನಡಿ ಹಿಡಿಯಲಿ ಎಂದು ಆಶಿಸುತ್ತೇನೆ.

~ಸತೀಶ್ ಜವರೇಗೌಡ
ಅಧ್ಯಕ್ಷರು, ಯುವ ಬರಹಗಾರರ ಬಳಗ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ