ಮಂಡ್ಯ ನಗರದ ಹೃದಯ ಭಾಗದಲ್ಲಿರುವ ನೂರಡಿ ರಸ್ತೆಯ ನೀರಿನ ಟ್ಯಾಂಕ್ ವೃತ್ತದಿಂದ ಬೆಸಗರಹಳ್ಳಿ ವೃತ್ತದವರೆಗೆ ಇರುವ ರಸ್ತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ನಾಮಕರಣ ಮಾಡಿ, ನಾಮಫಲಕ ಅನಾವರಣ ಮಾಡಿದರು.
1976ರಲ್ಲಿಯೇ ನೂರಡಿ ರಸ್ತೆಗೆ ಅಂಬೇಡ್ಕರ್ ರಸ್ತೆ ನಾಮಕರಣ ಮಾಡಿ ನಿರ್ಣಯ ಮಾಡಿದ್ದು, ಈ ಸಂಬಂಧ ವಾಟರ್ ಟ್ಯಾಂಕ್ ಬಳಿ ಡಾ.ಬಿ. ಆರ್. ಅಂಬೇಡ್ಕರ್ ವೃತ್ತ ಎಂದು ನಾಮಫಲಕ ಹಾಕಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಎರಡು ಜೋಡಿ ರಸ್ತೆಗಳನ್ನು ಡಾ.ಬಿ. ಆರ್. ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಬೇಕೆಂದು ತಮ್ಮ ಒತ್ತಾಯವಾಗಿತ್ತು. ಆದರೆ ಈ ಬಗ್ಗೆ ಅಧಿಕಾರಿಗಳು ಮೀನಾಮೇಷ ಎಣಿಸಿದ್ದರಿಂದ ಪ್ರಗತಿಪರ ಸಂಘಟನೆಗಳ ಮುಖಂಡರೇ ಆ ಕಾರ್ಯವನ್ನು ಮಾಡಿದ್ದೇವೆಂದು ‘ನಾವು ದ್ರಾವಿಡ ಕನ್ನಡಿಗರು ಸಂಘಟನೆ’ಯ ಅಭಿಗೌಡ ಹನಕೆರೆ ಹಾಗೂ ವಕೀಲ ಚೀರನಹಳ್ಳಿ ಲಕ್ಷ್ಮಣ್ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ವೇದಿಕೆಯ ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿ ಎಂ.ವಿ.ಕೃಷ್ಣ, ವಕೀಲ ಜೆ.ರಾಮಯ್ಯ, ಸಮಾನ ಮನಸ್ಕರ ಸಂಘಟನೆಯ ಟಿ.ಡಿ.ನಾಗರಾಜು, ಸೋಮನಹಳ್ಳಿ ಅಂದಾನಿ, ಗಂಗರಾಜು ಹಾಗೂ ತಾಳಶಾಸನ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




