Saturday, May 25, 2024

ಪ್ರಾಯೋಗಿಕ ಆವೃತ್ತಿ

ಬಡವರು ಮತ್ತು ಮಹಿಳೆಯರಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿ‌ ಡಾ: ಬಿ.ಆರ್. ಅಂಬೇಡ್ಕರ್ : ಸಚಿವ ಡಾ. ಕೆ. ಸಿ. ನಾರಾಯಣಗೌಡ

ಮಹಿಳೆಯರು ಬಡವರು ತುಳಿತಕ್ಕೊಳಗಾದವರಿಗಾಗಿಯೇ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಡಾ.ಅಂಬೇಡ್ಕರ್. ದಲಿತರಲ್ಲಿ ಶಿಕ್ಷಣ ಹಾಗೂ ಅವರ ಆರ್ಥಿಕ ಜೀವನ ಮಟ್ಟವನ್ನು ಹೆಚ್ಚಿಸಲು, ಹಾಗು ಅವರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು ,ಅದಕ್ಕೆ ಪರಿಹಾರಗಳನ್ನು ಸೂಚಿಸಿದವರು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಕೆ. ಸಿ ನಾರಾಯಣಗೌಡ ರವರು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಚರಿಸಲಾದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ-ದಲಿತರಿಗಾಗಿ ಹೋರಾಡಿದರು ಮತ್ತು ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು.
ಇಂತಹ ಮಹಾನ್ ನಾಯಕರ ಆದರ್ಶ, ಚಿಂತನೆಗಳು ಇಂದಿಗೂ ದಾರಿ ದೀಪವಾಗಿವೆ. ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಸರ್ಕಾರ ನಡೆಯುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಉದ್ದೇಶವನ್ನು ಇಟ್ಟುಕೊಂಡು ಎಲ್ಲರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿಂತಕರು, ಚಲನಚಿತ್ರ ನಿರ್ದೇಶಕರು ಹಾಗೂ ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಆದ ಡಾ. ಕೃಷ್ಣಮೂರ್ತಿ ಚಮರಂ ರವರು ಮಾತನಾಡಿ, ವಿಶ್ವಸಂಸ್ಥೆಯು ಡಾ. ಬಿ.ಆರ್.ಅಂಬೇಡ್ಕರ್ ರವರ 125ನೇ ಜನ್ಮ ದಿನಾಚರಣೆಯನ್ನು ವಿಶ್ವ ಜ್ಞಾನದ ದಿನ ಎಂದು ಆಚರಿಸಿದ್ದು, ಭಾರತೀಯರಾದಂತಹ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ದಲಿತರು, ಅಸ್ಪೃಶ್ಯರು ಹಾಗೂ ಸಮಾಜದ ಎಲ್ಲಾ ಸವರ್ಣೀಯರ ನಡುವೆ ಸಾಮರಸ್ಯ ಹಾಗೂ ಸಮ ಸಮಾಜ ನಿರ್ಮಾಣ ಮಾಡುವ ಆಶಯದೊಂದಿಗೆ ಸಮಾಜದ ಎಲ್ಲಾ ವರ್ಗದವರೂ ಒಗ್ಗಟ್ಟಾಗಿದ್ದಲ್ಲಿ ಮಾತ್ರ ದೇಶದಲ್ಲಿ ಸಾಮಾಜಿಕ ಭದ್ರತೆ ಮೂಡಲು ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿದರು.

ಭಾರತ ಸಂವಿಧಾನವನ್ನು ಬಹಳಷ್ಟು ಶ್ರದ್ದೆ ಮತ್ತು ಪರಿಶ್ರಮದಿಂದ ರಚಿಸಿ ದಲಿತರು ತುಳಿತಕ್ಕೊಳಗಾದವರಿಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆಗೆ ಒಂದು ಪ್ರಬಲ ಅಸ್ತ್ರವನ್ನು ನೀಡಿರುವುದು ಶ್ಲಾಘನೀಯ ಎಂದರು.

ಅಂಬೇಡ್ಕರ್ ಅವರಿಗೆ ಕಾರ್ಮಿಕ ಸಚಿವಾಲಯವನ್ನು ವಹಿಸಿದ್ದ ಸಂದರ್ಭದಲ್ಲಿ ಅವರು ದೇಶಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಪ್ರತಿ ನೌಕರರಿಗೆ ಎಂಟು ಗಂಟೆಗಳ ಕಾಲ ಕೆಲಸದ ಅವಧಿ, ಪ್ರತೀ ಕೆಲಸಕ್ಕೆ ನಿಗದಿತ ಸಂಬಳ ಇಷ್ಟೇ ಅಲ್ಲದೆ ಮಹಿಳೆಯರಿಗಾಗಿ ಅನೇಕ ಕಾನೂನುಗಳನ್ನು ಹೊರತಂದರು ಎಂದರು.

ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಪುರುಷರಿಗಿರುವಂತಹ ಸಮಾನತೆಯನ್ನು ನೀಡಬೇಕು. ತಂದೆ ಆಸ್ತಿಯನ್ನು ಹೆಣ್ಣುಮಕ್ಕಳಿಗೂ ನೀಡಬೇಕು ಅಷ್ಟೇ ಅಲ್ಲದೇ ವಿಧವಾ ಪುನರ್ ವಿವಾಹ ಕಾಯ್ದೆಗೆ ಹೆಚ್ಚು ಹೋರಾಟ ಮಾಡಿದ್ದು ಡಾ.ಅಂಬೇಡ್ಕರ್‌ರವರು ಎಂದು ಹೇಳಿದರು.

ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದ ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡುವುದರಲ್ಲಿ ಅವರ ಪಾತ್ರ ಮಹತ್ತರವಾದದ್ದು, ಇಡೀ ಸಂವಿಧಾನವನ್ನು ಅಂಬೇಡ್ಕರ್ ರವರೇ ಬರೆದಿದ್ದಾರೆ ಎಂಬಂತಹ ಮಾತನ್ನು ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಟಿ.ಟಿ ಕೃಷ್ಣಮಾಚಾರಿ ರವರೇ ತಮ್ಮ ಭಾಷಣದಲ್ಲಿ ಬಿತ್ತರಿಸಿದ್ದಾರೆ ಎಂದರು.

ಪ್ರತಿಯೊಬ್ಬರಿಗೂ ಮತದಾನ ಮಾಡುವಂತಹ ಹಕ್ಕನ್ನು ನೀಡಬೇಕು ಎಂದು ಅಂದಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ಹೋರಾಟ ಮಾಡಿ ಪ್ರತಿಯೊಬ್ಬರಿಗೂ ಮತದಾನ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟರು ಎಂದರು.

ಹಿಂದಿನ ಭಾರತೀಯ ರಿಸರ್ವ್ ಬ್ಯಾಂಕ್‌ನ ಸ್ಥಾಪನೆ ಮತ್ತು ಅಲ್ಲಿನ ಕಾರ್ಯವೈಖರಿಗಳು ಬಾಬಾ ಸಾಹೇಬರು ರಚಿಸಿದಂತಹ ನಿಯಮಾವಳಿಯಂತೆಯೇ ನಡೆಯುತ್ತಿವೆ ಎಂದರು.

ಇಷ್ಟು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ತುತ್ತಾಗಿ ಇದ್ದೇವೆ. ಭಾರತೀಯರಾದ ನಾವೆಲ್ಲರೂ ಜಾತಿ ಮತ ಧರ್ಮ ಎಂದು ವಿಂಗಡಣೆ ಮಾಡದೆ ನಾವೆಲ್ಲರೂ ಭಾರತೀಯರು ಎಂಬಂತಹ ಮನೋಭಾವದಿಂದ ಇರಬೇಕು ಎಂದು ಡಾಕ್ಟರ್ ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಕೊನೆಯದಾಗಿ ಮಾಡಿದ ಭಾಷಣದ ತುಣುಕನ್ನು ಬಿತ್ತರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಐಶ್ವರ್ಯ, ಜಿ.ಪಂ ಉಪಕಾರ್ಯದರ್ಶಿ ಸರಸ್ವತಿ, ಸಮಾಜ HB ಇಲಾಖೆಯ ಉಪ ನಿರ್ದೇಶಕರಾದ ಬಿ.ರಂಗೇಗೌಡ, ನಗರಸಭೆ ಅಧ್ಯಕ್ಷರಾದ ಹೆಚ್.ಎಸ್.ಮಂಜು, ಆಯುಕ್ತರಾದ ಎಸ್.ಲೋಕೇಶ್, ಸಹಾಯಕ ನಿರ್ದೇಶಕರಾದ ಕಾವ್ಯಶ್ರೀ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ವೆಂಕಟಗಿರಿ, ಕಾಡಾ ಅಧ್ಯಕ್ಷರಾದ ಎನ್.ಶಿವಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು, ವಿವಿಧ ಸಂಘಟನೆಗಳ ಸದಸ್ಯರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಹೈಟೆಕ್ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿದ ಸಚಿವ ನಾರಾಯಣಗೌಡ

Related Articles

ಅತ್ಯಂತ ಜನಪ್ರಿಯ

error: Content is protected !!