ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೇಲು ಕೀಳು ಮತ್ತು ಇನ್ನಿತರ ಮೂಢನಂಬಿಕೆಗಳ ಹೋಗಲಾಡಿಸಲು ಹಾಗೂ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ವ್ಯಕ್ತಿಗಳ ಸ್ಮರಣೆಗಾಗಿ ಹಾಗೂ ಅವರು ನೀಡಿದ ಕೊಡುಗೆಗಳನ್ನು ಯುವ ಜನತೆ ಅನುಸರಿಸಲು ಜಯಂತಿಗಳನ್ನು ಕರ್ನಾಟಕ ಸರ್ಕಾರ ಆಚರಿಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವನಂದಮೂರ್ತಿ ಹೇಳಿದರು.
ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ತಿದ್ದುವ ಉದ್ದೇಶದಿಂದ ಅಂಬಿಗರ ಚೌಡಯ್ಯನವರು ಅನೇಕ ವಚನಗಳನ್ನು ರಚಿಸಿ ಸಾಮಾಜಕ್ಕೆ ತಿಳಿಸಿದರು, ಅವರ ರಚಿಸಿರುವ ವಾಚನಗಳಲ್ಲಿ ಇರುವ ತತ್ವ ಮತ್ತು ಆದರ್ಶಗಳನ್ನು ಯುವಜನತೆ ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಂಡ್ಯ ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ ಮಾತನಾಡಿ, ಸಾಮಾಜವನ್ನು ತಿದ್ದಿದ ಮಹನೀಯ ವಚನಕಾರರಲ್ಲಿ ಅಂಬಿಗರ ಚೌಡಯ್ಯನವರು ಸಹ ಒಬ್ಬರು, ಇಂತಹ ಮಹಾನ್ ಚೇತನರ ಬದುಕು ನಮ್ಮೆಲ್ಲರಿಗೂ ಆದರ್ಶ. ಅವರ ವಾಚನಗಳ ಆಶಯವನ್ನು ಅರಿತುಕೊಂಡು ಅದರಂತೆ ಬದುಕೋಣ ಎಂದರು.
ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ಮಹನಿಯರ ಜಯಂತಿಗಳನ್ನು ಸರ್ಕಾರ ರಾಜ್ಯದಾದ್ಯಂತ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಸಂಗತಿ, ಕಾಯಕವನ್ನೇ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡು ಜಗತ್ತಿನ ಎಲ್ಲರನ್ನೂ ಸಮಾನ ಪ್ರೀತಿಯಿಂದ ಕಂಡವರು ವಾಚನಕಾರರು.ಜಾತಿ ಮತ ಧರ್ಮ ಪಂಥಗಳ ಅಂಗು ತೊರೆದು ನಾವು ಮೂಲತಃ ಮಾನವಧರ್ಮಿಯರು ಎಂದು ಪ್ರತಿಪಾದಿಸಿದವರು ಅಂಬಿಗರ ಚೌಡಯ್ಯನವರು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ ನಂದೀಶ್, ನಗರಸಭೆ ಉಪಾಧ್ಯಕ್ಷ ಅರುಣ್ ಕುಮಾರ್, ವಿವಿಧ ಸಂಘಗಳ ಮುಖಂಡರಾದ ದೇವರಾಜ್, ಗಾಯಿತ್ರಿ, ಟಿ.ಕೃಷ್ಣ, ಕೆ. ತಮ್ಮಣ್ಣ, ದೇವಾನಂದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ
ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನಿಟ್ಟು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ ಕುಮಾರ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗಾರಿ ಬಾರಿಸುವ ಮೂಲಕ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು




