ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರ ರಾಜ್ಯಗಳ ಮೇಲೆ ನಿರಂತರ ಹಿಂದಿ ಹೇರಿಕೆ ಮಾಡಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಎಲ್ಲೆಡೆ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಇದೇ ಡಿಸೆಂಬರ್ ನಿಂದ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಜತೆ ಸ್ಥಳೀಯ ಭಾಷೆಯಲ್ಲಿಯೇ ಪತ್ರ ವ್ಯವಹಾರ ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಕರ್ನಾಟಕ ಸರ್ಕಾರದ ಜತೆ ಕನ್ನಡದಲ್ಲಿ ತಮಿಳುನಾಡು ಸರ್ಕಾರದ ಜತೆ ತಮಿಳು ಹಾಗೂ ಇತರ ರಾಜ್ಯಗಳ ಜತೆ ಅಲ್ಲಿನ ಭಾಷೆಯಲ್ಲೇ ಸಂವಹನ ನಡೆಸುವುದಾಗಿ ತಿಳಿಸಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಸ್ಥಳೀಯ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದು ಮಾತನಾಡಿದ ಅಮಿತ್ ಶಾ ಡಿಸೆಂಬರ್ ಬಳಿಕ ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸತ್ ಸದಸ್ಯರೊಂದಿಗೆ ಅವರದೇ ಭಾಷೆಯಲ್ಲಿ ಪತ್ರವ್ಯವಹಾರ ಮಾಡುವುದಾಗಿ ತಿಳಿಸಿದ್ದಾರೆ.
ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಇದು ಬಲವಾದ ಪ್ರತ್ಯುತ್ತರವಾಗಿದೆ ಎಂದು ಅಮಿತ್ ಶಾ ಹೇಳಿದ್ರು. ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧಿಸುತ್ತದೆ ಎಂಬ ವಿಚಾರಕ್ಕೂ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತಿದ್ದೇವೆ ಅಂತಾರೆ ಇದು ಹೇಗೆ? ನಾನು ಗುಜರಾತ್ ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ವಿರೋಧಿಸಲು ಸಾಧ್ಯ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ರು.
ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ತಮಿಳು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಅಸ್ಸಾಮಿ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಿಗಾಗಿ ‘ಭಾರತೀಯ ಅಧಿಕೃತ ಭಾಷಾ ಇಲಾಖೆ’ಯನ್ನು ಸ್ಥಾಪಿಸಿದೆ ಎಂದು ಶಾ ಹೇಳಿದರು.




