-
ಬೇರೆ ಸಕ್ಕರೆ ಕಾರ್ಖಾನೆಗೆ ನಿಗದಿಪಡಿಸಿದ ಕಬ್ಬನ್ನು ಕಟಾವು ಮಾಡಬೇಡಿ
- 14 ದಿನದೊಳಗೆ ರೈತರಿಗೆ ಎಫ್.ಆರ್.ಪಿ ದರದಂತೆ ಹಣ ಪಾವತಿಸಿ
ಮಂಡ್ಯ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ತಮಗೆ ಮೀಸಲಿಟ್ಟ ಕ್ಷೇತ್ರದ ಕಬ್ಬನ್ನು ಮಾತ್ರ ಕಟಾವು ಮಾಡಬೇಕು, ಬೇರೆ ಸಕ್ಕರೆ ಕಾರ್ಖಾನೆಗೆ ನಿಗದಿಪಡಿಸಿರುವ ಕಬ್ಬನ್ನು ಕಟಾವು ಮಾಡಬಾರದೆಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಸಕ್ಕರೆ ಕಾರ್ಖಾನೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಂಗಾಮಿನ ಕಬ್ಬು ನುರಿಸುವಿಕೆ ಹಾಗೂ ಹಣ ಪಾವತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಷುಗರ್ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದು, ಈ ಕಾರ್ಖಾನೆ ವ್ಯಾಪ್ತಿಗೆ ಮೀಸಲಿರುವ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡಿಕೊಳ್ಳುತ್ತಿದ್ದು, ಇದರಿಂದ ಮೈಷುಗರ್ ಕಾರ್ಖಾನೆ ಕಬ್ಬು ನುರಿಸುವ ಕೆಲಸಕ್ಕೆ ತೊಂದರೆಯಾಗುತ್ತಿದೆ. ತಕ್ಷಣವೇ ಮೈಷುಗರ್ ವ್ಯಾಪ್ತಿಯ ಕಬ್ಬು ಕಟಾವು ಮಾಡುತ್ತಿದ್ದರೆ ನಿಲ್ಲಿಸಿ, ಕಟಾವನ್ನು ಮೈಷುಗರ್ ಕಾರ್ಖಾನೆಯವರೆ ಮುಂದುವರಿಸಲಿದ್ದಾರೆ ಎಂದರು.
ಜೂನ್ -ಜುಲೈ ವೇಳೆಯಲ್ಲಿ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗಳು ಕಟಾವು ಮಾಡುತ್ತಿದ್ದವು, ಆದರೆ ಮೈಷುಗರ್ ಕಾರ್ಖಾನೆ ಪ್ರಾರಂಭವಾಗದ ಹಿನ್ನಲೆ ಹಾಗೂ ರೈತರ ಹಿತದೃಷ್ಟಿಯಿಂದ ಕಟಾವಿಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಮುಂದೆ ಇದನ್ನು ಮುಂದುವರಿಸಬಾರದು ಎಂದು ಸೂಚಿಸಿದರು.
12 ರಿಂದ 14 ತಿಂಗಳುಗಳ ಅವಧಿ ತುಂಬಿದ ಕಬ್ಬನ್ನು ಆದ್ಯತೆ ಮೇರೆಗೆ ಕಟಾವು ಮಾಡಿ, ಈ ಬಾರಿ ದೂರು ಬಾರದಂತೆ ಎಲ್ಲರೂ ಎಚ್ಚರಿಕೆ ವಹಿಸಿ ಎಂದರು.
ಕಬ್ಬು ಕಟಾವು ಮಾಡಿದ 14 ದಿನದೊಳಗಾಗಿ ರೈತರಿಗೆ ಎಫ್.ಆರ್.ಪಿ ದರದಂತೆ ಹಣ ಪಾವತಿ ಮಾಡಬೇಕಿರುತ್ತದೆ. ಸಕ್ಕರೆ ಕಾರ್ಖಾನೆಯವರು 14 ದಿನಗಳಿಂತ ಹೆಚ್ಚಿನ ಅವಧಿಯ ಹಣ ಪಾವತಿ ಮಾಡದೆ ಉಳಿಸಿಕೊಂಡಿದ್ದಲ್ಲಿ ಪಾವತಿಸಿ ಎಂದರು.
ಉಪವಿಭಾಗಾಧಿಕಾರಿ ಶಿವನಂದ ಮೂರ್ತಿ ಮಾತನಾಡಿ, ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ 5 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ಕುಂಇ ಅಹಮದ್, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾ ಸಾಹೇಬ, ಆಹಾರ ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಆರ್.ಅಶೋಕ್, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್. ನಿರ್ಮಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




