Saturday, May 18, 2024

ಪ್ರಾಯೋಗಿಕ ಆವೃತ್ತಿ

ಪಂಚರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್: ನವೆಂಬರ್ ನಲ್ಲಿ ತೆಲಂಗಾಣ ಚುನಾವಣೆ

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ  ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಗಳ  ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ನವದೆಹಲಿಯಲ್ಲಿ  ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವೇಳಾಪಟ್ಟಿ ಪ್ರಕಟಿಸಿದರು.

ವೇಳಾಪಟ್ಟಿ ಹೀಗಿದೆ

  • ಮಧ್ಯ ಪ್ರದೇಶ: ಚುನಾವಣಾ ದಿನಾಂಕ:ನವೆಂಬರ್ 17 , ಫಲಿತಾಂಶ: ಡಿಸೆಂಬರ್ 3
  • ಛತ್ತೀಸ್‌ಗಡ: ಚುನಾವಣಾ ದಿನಾಂಕ: ನವೆಂಬರ್ 7 ಮತ್ತು 17 , ಫಲಿತಾಂಶ: ಡಿಸೆಂಬರ್ 3 – ಎರಡು ಹಂತ
  • ತೆಲಂಗಾಣ: ಚುನಾವಣಾ ದಿನಾಂಕ: ನವೆಂಬರ್ 30 , ಫಲಿತಾಂಶ: ಡಿಸೆಂಬರ್ 3
  • ರಾಜಸ್ಥಾನ: ಚುನಾವಣಾ ದಿನಾಂಕ:ನವೆಂಬರ್ 23 , ಫಲಿತಾಂಶ:ಡಿಸೆಂಬರ್ 3
  • ಮಿಜೋರಾಂ: ಚುನಾವಣಾ ದಿನಾಂಕ: ನವೆಂಬರ್ 7 , ಫಲಿತಾಂಶ: ಡಿಸೆಂಬರ್ 3
  • ಛತ್ತೀಸ್‌ಗಡ ಹೊರತು ಪಡಿಸಿ ಉಳಿದ 4 ರಾಜ್ಯಗಳ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ”ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇರಲಿದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಮೊದಲ ಬಾರಿಗೆ ಮತದಾರರಾಗಿದ್ದಾರೆ” ಎಂದು ಹೇಳಿದರು.

”ಐದು ವಿಧಾನಸಭಾ ಚುನಾವಣೆಗೆ ಮುನ್ನ ನಾವು ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರು, ರಾಜಕೀಯ ಪಕ್ಷಗಳ ವಕ್ತಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ” ಎಂದು ಹೇಳಿದ್ದಾರೆ.

ಚುನಾವಣಾ ಆಯುಕ್ತರು ನೀಡಿರುವ ಮಾಹಿತಿಯಂತೆ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17ಗೆ ಕೊನೆಗೊಳ್ಳಲ್ಲಿದ್ದು, ಛತ್ತೀಸ್ಗಢ ವಿಧಾನಸಭೆ ಅವಧಿ ಜನವರಿ 3, ಮಧ್ಯಪ್ರದೇಶ ವಿಧಾನಸಭೆ ಅವಧಿ ಜನವರಿ 8, ರಾಜಸ್ಥಾನ ವಿಧಾನಸಭೆ ಅವಧಿ ಜನವರಿ 14 ಮತ್ತು ತೆಲಂಗಾಣ  ವಿಧಾನಸಭೆ ಅವಧಿಯು ಜನವರಿ 18ಕ್ಕೆ ಕೊನೆಗೊಳ್ಳಲಿದೆ.

”ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳು, ಛತ್ತೀಸ್‌ಗಢದ- 90 ಸ್ಥಾನಗಳು, ರಾಜಸ್ಥಾನದ 200 ಸ್ಥಾನಗಳು, ತೆಲಂಗಾಣದ 119 ಸ್ಥಾನಗಳು ಮತ್ತು ಮಿಜೋರಾಂನ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾರರು ಅಕ್ಟೋಬರ್ 17 ರಿಂದ ನವೆಂಬರ್ 30 ರವರೆಗೆ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ನವೀಕರಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅಂತೆಯೇ 5 ರಾಜ್ಯಗಳಲ್ಲಿ 1.77 ಲಕ್ಷ ಮತಗಟ್ಟೆಗಳು ಮತ್ತು 1.01 ಲಕ್ಷ ಮತಗಟ್ಟೆಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ” ಎಂದು ಅವರು ಮಾಹಿತಿ ನೀಡಿದರು.

ಚುನಾವಣೆ ನಡೆಯುವ ಈ ಐದು ರಾಜ್ಯಗಳಲ್ಲಿ 940 ಕ್ಕೂ ಹೆಚ್ಚು ಅಂತರ-ರಾಜ್ಯ ಗಡಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ನಾವು ಯಾವುದೇ ಅಕ್ರಮ ನಗದು, ಮದ್ಯ, ಉಚಿತ ವಸ್ತುಗಳು ಮತ್ತು ಮಾದಕ ವಸ್ತುಗಳ ಗಡಿಯಾಚೆಗಿನ ಚಲನೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!