ವಿಜಯಪುರ ಜಿಲ್ಲೆಯ ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೌರ್ಜನ್ಯವೆಸಗಿದವರ ಆಸ್ತಿ ಮುಟ್ಟುಗೋಲು ಹಾಕಿ ಗಾಯಗೊಂಡವರ ವೈದ್ಯಕೀಯ ವೆಚ್ಚ ಭರಿಸಿ, ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಇಟ್ಟಿಗೆ ಕಾರ್ಖಾನೆಯ ಮಾಲೀಕನೊಬ್ಬ ತನ್ನ ಕಾರ್ಮಿಕರ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿರುವ ಪ್ರಕರಣವನ್ನು ಕದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ಆರೋಪಿಗಳ ವಿರುದ್ಧ ಗೂಂಡಾಕಾಯ್ದೆ ದಾಖಲಿಸಬೇಕು. ಆತನ ಕಾರ್ಖಾನೆಗೆ ಸರ್ಕಾರದಿಂದಲೇ ಬೀಗ ಜಡಿಯಬೇಕು ಎಂದು ಆಗ್ರಹಿಸಿದರು.
ದಲಿತರ ಈ ರೀತಿಯ ದೌರ್ಜನ್ಯಗಳು ನಡೆದಲ್ಲಿ ಆರೋಪಿಗಳು ೬ ತಿಂಗಳು ನ್ಯಾಯಾಲಯಕ್ಕೆ ಯಾವುದೇ ರೀತಿಯ ಅರ್ಜಿ ಸಲ್ಲಿಸದಂತೆ ಕಾನೂನು ತಿದ್ದುಪಡಿ ಮಾಡಬೇಕು. ಮಾದಿಗ ಸಮುದಾಯದ ಮೇಲೆ ಕೆಟ್ಟ ಮನಸ್ಥಿತಿಯಿಂದ ನಡೆದುಕೊಳ್ಳುವ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸದರಿ ಸಮುದಾಯದ ಪರವಾಗಿ ಕದಸಂಸ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಪ್ರಕಾಶ್, ಚಾಮನಹಳ್ಳಿ ಶೇಖರ್, ಪುಟ್ಟಲಿಂಗಯ್ಯ, ಕೆ.ಸಿ.ರವಿಕುಮಾರ್, ಶೇಖರ್ ಇದ್ದರು.




