ಬಾಲ್ಯ ವಿವಾಹ ಸಮಾಜದ ಪಿಡುಗಾಗಿದ್ದು, ಇದನ್ನು ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಮಿಷನ್ ವಾತ್ಸಲ್ಯ ಮಾರ್ಗಸೂಚಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 180 ಪ್ರಕರಣಗಳು ವರದಿಯಾಗಿದ್ದು,105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.ಮಂಡ್ಯ – 42, ಮದ್ದೂರು – 15, ಮಳವಳ್ಳಿ – 20, ಶ್ರೀರಂಗಪಟ್ಟಣ – 26, ಪಾಂಡವಪುರ – 25, ನಾಗಮಂಗಲ – 13, ಕೆ ಆರ್ ಪೇಟೆ – 39 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಒಟ್ಟು 105 ಬಾಲ್ಯ ವಿವಾಹವನ್ನು ತಡೆಯಲಾಗಿದ್ದು, 75 ಬಾಲ್ಯ ವಿವಾಹ ಪ್ರಕರಣಗಳ ಮೇಲೆ ಎಫ್ ಐ ಆರ್ ದಾಖಲಾಗಿವೆ ಎಂದರು.
ಸಮಿತಿ ರಚಿಸಿ
ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗಾಗಿದೆ. ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲಿ ಒಂದು ಸಮಿತಿ ರಚಿಸಿ ಬಾಲ್ಯ ವಿವಾಹ ಜರುಗಲಿಕ್ಕೆ ಕಾರಣಗಳೇನು ಎಂಬ ಸಮೀಕ್ಷೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದರು.
ಬಾಲ್ಯ ವಿವಾಹ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ, ಬಾಲ್ಯ ವಿವಾಹ ನಡೆಯದಂತೆ ಜನರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಬಾಲ್ಯ ವಿವಾಹಗಳು ಜರುಗುವ ಹಾಗೂ ಪದೇ ಪದೇ ಮರುಕಳಿಸುವಂತಹ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಬಗ್ಗೆ ಹಾಗೂ ನಿರಂತರ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಬಗ್ಗೆ ಗಮನವಹಿಸಿ ಮಾಹಿತಿ ನೀಡಬೇಕೆಂದು ತಿಳಿಸಲಾಯಿತು.
ಮಕ್ಕಳ ರಕ್ಷಣಾ ಸಮಿತಿಯ ಕಾರ್ಯಗಳು, ವಿಶೇಷ ಪಾಲನೆ ಯೋಜನೆ ನಡೆಯುತ್ತಿರುವ ಬಗೆ ಮತ್ತು ದತ್ತು ಯೋಜನೆಗೆ ಸಂಬಂಧಿಸಿದಂತೆ ದತ್ತು ಪ್ರಕ್ರಿಯೆ ಬಗ್ಗೆ ವಿವರಗಳನ್ನು ಪಡೆದುಕೊಂಡರು.
ಮಂಡ್ಯ ಜಿಲ್ಲೆಯಲ್ಲಿ 02 ಸರ್ಕಾರಿ ಬಾಲ ಮಂದಿರಗಳು, 02 ಸರ್ಕಾರಿ ಅನುದಾನಿತ ದತ್ತು ಸೇವಾ ಕೇಂದ್ರಗಳು, 16 ಸರ್ಕಾರೇತರ ಮಕ್ಕಳ ಪಾಲನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಬಾಲನ್ಯಾಯ ಕಾಯ್ದೆಯಡಿ ಒಟ್ಟು 20 ಮಕ್ಕಳ ಪಾಲನಾ ಸಂಸ್ಥೆಗಳು ನೋಂದಣಿಯಾಗಿವೆ. 02 ಮಕ್ಕಳ ಪಾಲನ ಸಂಸ್ಥೆಗಳು ಬಾಲ ನ್ಯಾಯ ಕಾಯ್ದೆಯಡಿ ನವೀಕರಣಗೊಂಡಿದ್ದು, ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲು ಉಳಿದ 18 ಸಂಸ್ಥೆಗಳು ಬಾಕಿ ಇವೆ ಎಂದರು.
ಜಿಲ್ಲೆಯಲ್ಲಿ 2023 – 2024 ನೇ ಸಾಲಿನ ಪ್ರಾಯೋಜಕತ್ವ ಯೋಜನೆಯಡಿಯಲ್ಲಿ ಒಟ್ಟು 452 ಫಲಾನುಭವಿಗಳು ಸಹಾಯಧನ ಪಡೆದಿದ್ದು, 2024 – 2025 ನೇ ಸಾಲಿನಲ್ಲಿ ಒಟ್ಟು 167 ಅರ್ಜಿಗಳು ಸ್ವೀಕೃತವಾಗಿವೆ.
ಜಿಲ್ಲಾ ಮಕ್ಕಳ ಸಹಾಯವಾಣಿ – 1098
2011 ರಿಂದ ಆಗಸ್ಟ್ – 2023 ರ ವರೆಗೆ ಮಕ್ಕಳ ಸಹಾಯವಾಣಿಯ ಸ್ವಯಂಸೇವಾ ಸಂಸ್ಥೆಯ ಮುಖಾಂತರ ನಡೆಯುತ್ತಿತ್ತು, ಸೆಪ್ಟೆಂಬರ್ – 2023 ರಿಂದ ಮಕ್ಕಳ ಸಹಾಯವಾಣಿಯು ಕೇಂದ್ರ ಪುರಸ್ಕೃತ ಯೋಜನೆಯಾದ ಮಿಷನ್ ವಾತ್ಸಲ್ಯ ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
2023 – ಸೆಪ್ಟೆಂಬರ್ ತಿಂಗಳಿಂದ 2024 ರ ಮಾರ್ಚ್ – 2024 ರವರೆಗೆ ಮಕ್ಕಳ ಸಹಾಯವಾಣಿ – 1098 ಗೆ ಒಟ್ಟು 365 ಪ್ರಕರಣಗಳು ದಾಖಲಾಗಿದ್ದು, ಶೈಕ್ಷಣಿಕ ಸಮಸ್ಯೆ – 84, ಬಾಲ್ಯ ವಿವಾಹ – 78, ಕೌಟುಂಬಿಕ ಸಮಸ್ಯೆ – 11, ವೈದ್ಯಕೀಯ ಸಮಸ್ಯೆ – 1, ಪ್ರಾಯೋಜಕತ್ವ – 59, ದೈಹಿಕ ಹಿಂಸೆ – 34, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ – 10, ಬಾಲಕಾರ್ಮಿಕ – 9, ಕಾಣೆಯಾದ ಮಕ್ಕಳು – 30, ಭಿಕ್ಷಾಟಣೆ – 8, ಆಪ್ತ ಸಮಾಲೋಚನೆ – 5, ಇತರೆ – 36 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರು ಮಾತನಾಡಿ ಜಿಲ್ಲೆಯಲ್ಲಿ 18 ವರ್ಷದೊಳಗಿರುವ ಹೆಣ್ಣುಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದು, ಅಂತಹ ಹೆಣ್ಣು ಮಕ್ಕಳು ಹಾಗೂ ಪೋಷಕರಿಗೆ ಮುಂಚಿತವಾಗಿಯೇ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ ಹಾಗೂ ಅಂಗನವಾಡಿ ಶಿಕ್ಷಕರು ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ಸಾರ್ವಜನಿಕರು ಕೂಡ ಬಾಲ್ಯ ವಿವಾಹಗಳು ಜರುಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಪೊಲೀಸ್ ಇನ್ಸ್ ಪೆಕ್ಟರ್ ಬಿ. ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್ ರಾಜಮೂರ್ತಿ, ನಿರೂಪಣಾಧಿಕಾರಿ ಧರಣಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ನಾಗಾನಂದ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




