ಕರ್ನಾಟಕ ಸಂಘ ಹಾಗೂ ಬಿಜಿ ದಾಸೇಗೌಡರ ಕುಟುಂಬ ವರ್ಗದ ವತಿಯಿಂದ ಆಡಳಿತ ತಜ್ಞ ಬಿ.ಜಿ. ದಾಸೇಗೌಡ ಕೃತಿ ಬಿಡುಗಡೆ ಸಮಾರಂಭವನ್ನು ಮೇ 15ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ತಿಳಿಸಿದರು .
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ಆಗಿದ್ದ ಬಿ.ಜಿ. ದಾಸೇಗೌಡರು ಕಾರ್ಖಾನೆ ಪ್ರಗತಿ ಶ್ರಮಿಸಿದ್ದರು, ಜಿಲ್ಲೆಯಲ್ಲಿ ಈ ಕಾರ್ಖಾನೆಯಿಂದಾಗಿ ಹಲವಾರು ವಾಣಿಜ್ಯ ಚಟುವಟಿಕೆಗಳು ಗರಿಗೆದರಿದವು, ಇದಕ್ಕೆ ಮೂಲ ಕಾರಣಕರ್ತರೆಂದರೆ ಬಿ.ಜಿ.ದಾಸೇಗೌಡರು, ಅವರನ್ನು ಜಿಲ್ಲೆಯ ಜನತೆ ಪರಿಚಯಿಸುವ ಉದ್ದೇಶದಿಂದ ಕೃತಿಯನ್ನು ಹೊರತರಲಾಗುತ್ತಿದೆ ಎಂದರು.
ಅಂದಿನ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸುವರು. ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಟಿ ಶ್ರೀಕಂಠೇಗೌಡ ಅವರು, ಕೃತಿ ಹಾಗೂ ಬಿ.ಜಿ ದಾಸೇಗೌಡರ ಕುರಿತು ಮಾತನಾಡುವರು ಎಂದರು .
ಈ ಸಂದರ್ಭದಲ್ಲಿ ಮೈಶುಗರ್ ಕಂಪನಿಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಬಿ ಮೋಹನ್ ದಾಸ್, ರೈತ ಮುಖಂಡ ಕೆ ಬೋರಯ್ಯ ,ಕೃತಿಯ ಕರ್ತೃ ಚಂದಗಾಲು ಲೋಕೇಶ್ ಉಪಸ್ಥಿತರಿರುವರು ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಕೊಲ್ಮನ್ ಮತ್ತು ವಿಶ್ವೇಶ್ವರಯ್ಯ ಅವರ ಶ್ರಮದಿಂದ ಇಡೀ ಏಷ್ಯಾ ಖಂಡದಲ್ಲಿಯೇ ಸರ್ಕಾರಿ ಸ್ವಾಮ್ಯದಲ್ಲಿ ಮೈಷುಗರ್ ಕಾರ್ಖಾನೆಯನ್ನು ತೆರೆಯಲಾಯಿತು. ಬಿ.ಜಿ ದಾಸೇಗೌಡರು ಕಂಪನಿಯಲ್ಲಿ ಅಧಿಕಾರಿಯಾಗಿ ಕಾರ್ಖಾನೆಯ ಯಶಸ್ವಿಗೆ ಶ್ರಮ ಹಾಕಿದ್ದಾರೆ. ಶಿಸ್ತಿಗೆ ಮತ್ತೊಂದು ಹೆಸರೇ ದಾಸೇಗೌಡರಾಗಿದ್ದರು ಎಂದು ಸ್ಮರಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡ ಕೆ ಬೋರಯ್ಯ ,ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್, ಚಂದಗಾಲು ಲೋಕೇಶ್, ನಿವೃತ್ತ ಮೆಕಾನಿಕಲ್ ಇಂಜಿನಿಯರ್ ಗಿರಿದಾಸ್ ,ನಾಗಪ್ಪ ಉಪಸ್ಥಿತರಿದ್ದರು.




