ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದಕ್ಕೆ ಮುಂದಾಗುತ್ತವೆ, ಈ ರೀತಿಯ ಹೊಂದಾಣಿಕೆಯಿಂದ ನಾನು ಸೇರಿದಂತೆ ಹಲವು ಬಿಜೆಪಿ ಅಭ್ಯರ್ಥಿಗಳು ಈ ಹಿಂದೆ ಸೋಲು ಕಂಡಿದ್ದೇವೆ, ಬಿಜೆಪಿ ಪಕ್ಷದ ಇಂತಹ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆಂದು ಎಂದು ಮಾಜಿ ಸಚಿವ ಬಿ.ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ದಾಂತ ಮತ್ತು ಬದ್ಧತೆ ಇಲ್ಲ, ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ತಮ್ಮ ಶಕ್ತಿ ಪ್ರದರ್ಶಿಸಿ ಅಧಿಕಾರಗಳಿಸುವುದು ಜೆಡಿಎಸ್ ಪಕ್ಷದ ಗುರಿಯಾಗಿದೆ ಎಂದು ಟೀಕಿಸಿದರು.
ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪೃಶ್ಯ ಪರಿಶಿಷ್ಠ ಜಾತಿಗೆ ಸೇರಿದ ಅಭ್ಯರ್ಥಿ ಬಿಜೆಪಿ ಮಣೆ ಹಾಕಿದ್ದು, ನನಗೆ ಅವಕಾಶ ವಂಚಿಸಲಾಗಿದೆ. ಈ ಧೋರಣೆ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಪ್ರಚಾರ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರಂತಹ ಹಿರಿಯ ರಾಜಕಾರಣಿಗಳನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ. ಜನತಾ ಪರಿವಾರದಲ್ಲಿ ಮೂರು ದಶಕಗಳ ಕಾಲ ಕಾರ್ಯನಿರ್ವಹಿಸಿ ಕಳೆದೊಂದು ದಶಕದ ಅವಧಿಯಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸಿದ ನನ್ನಂತಹ ಹಿರಿಯರನ್ನು ಬಿಜೆಪಿ ಕಡೆಗಣಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆಂದು ತಿಳಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಪಕ್ಷ ಸಮಾಜದ ಹಿಂದುಳಿದವರು, ದಲಿತರು ಹಾಗೂ ಶೋಷಿತರ ದಮನಕಾರಿ ಪ್ರವೃತ್ತಿಗೆ ಆಂತರಿಕ ಅಜೆಂಡಾ ಜಾರಿಗೊಳಿಸಿ ಹುನ್ನಾರದಿಂದ ಈ ಸಮುದಾಯಗಳನ್ನು ಶೋಷಣೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಬದಲಾಯಿಸುವ ಇರಾದೆ ಬಿಜೆಪಿ ಪಕ್ಷದ ಅಜೆಂಡವಾಗಿದ್ದು, ಮೀಸಲಾತಿ ಪ್ರಭಾವವನ್ನು ಹೆಚ್ಚಿಸದೇ ಅನ್ಯರ ಮೀಸಲಾತಿಯನ್ನು ರದ್ದುಗೊಳಿಸಿ ಇತರರಿಗೆ ನೀಡುವ ಮೂಲಕ ಬಿಜೆಪಿ, ಪ್ರಯೋಜನವಿಲ್ಲದ ಮೀಸಲಾತಿ ಹಂಚಿಕೆ ಮಾಡಿ, ಮೂಗಿಗೆ ತುಪ್ಪ ಸವರಿದೆ ಎಂದು ಚಾಟಿ ಬೀಸಿದರು.
ಬಿಜೆಪಿ ಆಳ್ವಿಕೆಯಲ್ಲಿ ಧರ್ಮಾಂಧತೆಯ ಶೋಷಣೆ, ಜಾತೀಯತೆಯ ವೈಭವೀಕರಣ ಸಾಗಿದ್ದು, ಇದನ್ನು ಮೆಟ್ಟಿ ನಿಲ್ಲಲು ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಹುನ್ನಾರವನ್ನು ಬಯಲುಗೊಳಿಸುತ್ತೇನೆ, ಆ ಮೂಲಕ ರಾಜ್ಯದ ಮತದಾರರು ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿದ್ದು, ಎಐಸಿಸಿ ಗದ್ದುಗೆಗೆ ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೂಕ್ತಿಗೊಳಿಸಿರುವುದು ಕಾಂಗ್ರೆಸ್ ಗೆ ವರದಾನವಾಗಲಿದೆ ಎಂದರು.
ಗೋಷ್ಟಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅಂಜನಾ ಶ್ರೀಕಾಂತ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಮುಖಂಡರಾದ ವಿಜಯಲಕ್ಷ್ಮಿ ರಘುನಂದನ್, ದ್ಯಾವಪ್ಪ ಇತರರಿದ್ದರು.




