ಬ್ಯಾಂಕಿನಲ್ಲಿ ಒಡವೆಗಳನ್ನು ಅಡವಿಟ್ಟು ಪಡೆದಿದ್ದ ಸಾಲ ತೀರಿಸಿದ್ದರೂ ಗ್ರಾಹಕರಿಗೆ ಒಡವೆಗಳನ್ನು ಹಿಂತಿರುಗಿಸದೆ ಸತಾಯಿಸುತ್ತಿದ್ದ ಬ್ಯಾಂಕ್ ವ್ಯವಸ್ಥಾಪಕಿ ವಿರುದ್ಧ ಜನವಾದಿ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕಿ ಕಾತ್ಯಾಯಿನಿ ಎಂಬುವರು ಗ್ರಾಹಕರಾದ ಸಬ್ಬನಕುಪ್ಪೆ ಗ್ರಾಮದ ರಾಜಣ್ಣನವರಿಗೆ ಒಡವೆ ವಾಪಾಸ್ ಮಾಡದೆ ಸತಾಯಿಸುತ್ತಿದ್ದ ಸುದ್ದಿ ತಿಳಿದ ಜನವಾದಿ ಮಹಿಳಾ ಸಂಘದ ಸದಸ್ಯರು ಇಂದು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ವ್ಯವಸ್ಥಾಪಕಿ ಕಾತ್ಯಾಯಿನಿ ಅವರನ್ನು ತರಾಟೆಗೆ ತೆಗೆದುಕೊಂಡು ರಾಜಣ್ಣನವರಿಗೆ ಒಡವೆಗಳನ್ನು ವಾಪಾಸು ಕೊಡಿಸಿದರು.ಅಲ್ಲದೆ ಕೃಷಿಕರಿಗೆ ಬಡ್ಡಿರಹಿತ ಸಾಲ ನೀಡಬೇಕೆಂದು ಒತ್ತಾಯಿಸಿದರು.
ರಾಜಣ್ಣನವರು ತುರ್ತು ಪರಿಸ್ಥಿತಿ ಕಾರಣದಿಂದ ಬ್ಯಾಂಕ್ ನಲ್ಲಿ ಒಡವೆಗಳನ್ನು ಇಟ್ಟು 1.40 ಲಕ್ಷ ರೂ ಸಾಲ ಪಡೆದಿದ್ದರು. ಬಳಿಕ ಸಾಲದ ಹಣ ಮರು ಪಾವತಿ ಮಾಡಿದ್ದರೂ ಒಡವೆಗಳನ್ನು ಮಗಳ ಶಿಕ್ಷಣ ಸಾಲ ತೀರಿಸುವವರೆಗೂ ಕೊಡಲು ಸಾಧ್ಯವಿಲ್ಲವೆಂದು ಸತಾಯಿಸಿದ್ದರು.
ಜನವಾದಿ ಸಂಘಟನೆಯ ಪದಾಧಿಕಾರಿಗಳಾದ ಜಯಮ್ಮ, ಪ್ರಭಾ, ಸುಶೀಲಾ, ಲಕ್ಷ್ಮಮ್ಮ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿದ್ದರು.