ಪೂರ್ಣಿಮ
ರಾಜ್ಯ ಕಾರ್ಯದರ್ಶಿ, ಮಹಿಳಾ ಮುನ್ನಡೆ
ʼಬೂಕರ್ ಪ್ರಶಸ್ತಿ’ಪಡೆದು ಕನ್ನಡಕ್ಕೆ ಅಂತರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಸಾಹಿತಿ ಬಾನು ಮುಷ್ತಾಕ್ ಅವರಿಂದ 2025ರ ನಾಡಹಬ್ಬ ದಸರಾ ಉದ್ಘಾಟಿಸುವ ರಾಜ್ಯಸರ್ಕಾರ ಆಯ್ಕೆ ಅತ್ಯಂತ ಸೂಕ್ತವಾದುದು’
‘ಈ ಆಯ್ಕೆಗೆ ಧರ್ಮದ ಬಣ್ಣವನ್ನು ಕೊಟ್ಟು ವಿರೋಧಿಸುತ್ತಿರುವುದನ್ನು ನಾಡಿನ ಪ್ರಜ್ಞಾವಂತ ಮಹಿಳೆಯರು ಮತ್ತು ನಾಗರೀಕರು ಖಂಡಿಸುತ್ತೇವೆ
‘ಎದೆಯ ಹಣತೆʼ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಬೂಕರ್ ಪ್ರಶಸ್ತಿಯನ್ನು ಪಡೆದು, ಕನ್ನಡಕ್ಕೆ ಕೀರ್ತಿ ತಂದ ಶ್ರೇಷ್ಠ ಸಾಹಿತಿಯೊಬ್ಬರನ್ನು ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಕನ್ನಡನಾಡಿಗೆ ಗೌರವದ, ಅಭಿಮಾನದ ವಿಷಯವಾಗಬೇಕಿತ್ತು. ಆದರೆ, ಇಂತಹ ಸಂಭ್ರಮದ ವಿಚಾರದಲ್ಲಿ, ಧರ್ಮ, ದೇವರು, ರಾಜಕೀಯದ ವಿಷವನ್ನು ಬೆರೆಸಿ, ನೀಚ ರಾಜಕಾರಣ ಪ್ರಾರಂಭಿಸಿದ ಕೆಲವು ಕುಟಿಲ ಶಕ್ತಿಗಳ ಕಾರಣದಿಂದ, ಬೂಕರ್ ಪ್ರಶಸ್ತಿ ವಿಜೇತ ಹೆಮ್ಮೆಯ ಸಾಹಿತಿ ಬಾನು ಮುಷ್ತಾಕ್ ರವರ ಆಯ್ಕೆ ಇಂದು ಪರ- ವಿರೋಧ ಚರ್ಚೆಗಳ ಕಣವಾಗಿ ಪರಿವರ್ತಿತವಾಗಿದೆ.
ಮೈಸೂರು ದಸರಾ ಕನ್ನಡಿಗರ ಮಟ್ಟಿಗೆ, ನಮ್ಮ ನಾಡು-ನುಡಿ, ಸಾಂಸ್ಕ್ರತಿಕ ಅಸ್ಮಿತೆಯನ್ನು ಮೆರೆಯುವ ಪಾರಂಪರಿಕ ಆಚರಣೆ. ಇದರ ಉದ್ಘಾಟನೆಯನ್ನು ಈವರೆಗೆ ಮಾಡಿದ ಮಹನೀಯರ- ಮಹಿಳೆಯರ ಆಯ್ಕೆಗೆ, ಕನ್ನಡ ನಾಡಿಗೆ ಅವರು ನೀಡಿದ ಕೊಡುಗೆ ಮಾತ್ರ ಮಾನದಂಡವಾಗಿತ್ತೇ ಹೊರತು, ಅವರ ಹುಟ್ಟಿನ ಹಿನ್ನೆಲೆ ಎಂದೂ ಚರ್ಚೆಯ ವಿಚಾರವಾಗಿರಲಿಲ್ಲ. ಆದರೆ ನಾಡ ಹಬ್ಬವನ್ನು ಈಗ ಧಾರ್ಮಿಕ ಹಬ್ಬವನ್ನಾಗಿ ಬಿಂಬಿಸಿ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದು ಅಸಮರ್ಪಕ ಎಂಬ ಪ್ರಚಾರ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ!
ಅವರ ಧರ್ಮದ ಹಿನ್ನೆಲೆ ಮಾತ್ರವಲ್ಲದೆ ಧರ್ಮದ ಚೌಕಟ್ಟಿನಲ್ಲಿ ಮಹಿಳೆಯನ್ನು ತುಚ್ಚವಾಗಿ ಕಾಣುವ ಪುರುಷ ಪ್ರಧಾನ ಮನಸ್ಥಿತಿಯ ಪ್ರತೀಕವಾಗಿಯೂ ಈ ಚರ್ಚೆಗಳು ನಡೆಯುತ್ತಿವೆ.
ಸಾಹಿತ್ಯ, ಸಂಗೀತ, ಕಲೆಗಳಿಗೆ ಜಾತಿ, ಮತ-ಧರ್ಮ, ಲಿಂಗ, ಭಾಷೆಗಳ ಹಂಗಿಲ್ಲ. ಅವು, ಈ ಗಡಿಗಳನ್ನೆಲ್ಲ ದಾಟಿ, ಜಗತ್ತಿನುದ್ದಗಲಕ್ಕೂ ಇರುವ ಮನುಷ್ಯಕುಲವನ್ನು ತಲುಪುವಂಥವು, ತಮ್ಮ ಸಂದೇಶವನ್ನು ಮುಟ್ಟಿಸುವಂಥವು…. ಹೀಗಿರುವಾಗ, ಶಾಂತಿ-ಸೌಹಾರ್ದತೆಯ ತತ್ವಗಳ ನೆಲೆವೀಡಾದ ಕನ್ನಡ ನಾಡಿನಲ್ಲಿ ಇಂತಹ ಚರ್ಚೆ ನಾಡಹಬ್ಬದ ಸಂದರ್ಭದಲ್ಲಿ ಆರಂಭವಾಗಿರುವುದು ನಮಗೆ ತೀವ್ರವಾದ ಆಘಾತವನ್ನು ಉಂಟುಮಾಡಿದೆ.
ಸಾಂಸ್ಕ್ರತಿಕವಾದ ಈ ನಾಡಹಬ್ಬವನ್ನು ಉದ್ಘಾಟಿಸಲು ರಾಜ್ಯದ ಗಣ್ಯವ್ಯಕ್ತಿಯನ್ನು ಸರ್ಕಾರವು ಆಹ್ವಾನಿಸುತ್ತದೆ. ಈ ಹಿಂದೆಯೂ ಹಲವು ಗಣ್ಯ ವ್ಯಕ್ತಿಗಳು ಆಹ್ವಾನಿತರಾಗಿದ್ದು, ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ರವರಿಂದ ಹಿಡಿದು, ಅನೇಕರು ಈ ಹಿಂದೆ ದಸರಾ ಉದ್ಘಾಟನೆ ಮಾಡಿದ್ದಾರೆ. ಆಗ ಯಾವ ತಕರಾರು ಬಂದಿರಲಿಲ್ಲ. ಆದರೆ, ಈಗ ಬಾನು ಮುಷ್ತಾಕ್ ರವರ ವಿಚಾರ ಬಂದಾಗ ಮಾತ್ರ ಧರ್ಮ ಆಚರಣೆ ಎಂಬಿತ್ಯಾದಿ ಚರ್ಚೆ ತೆಗೆದು ಇವರ ಭಾಗವಹಿಸುವಿಕೆಯನ್ನು ವಿರೋಧಿಸಲಾಗುತ್ತಿದೆ. ಅವರ ಕೆಲವು ಭಾಷಣದ ತುಣುಕುಗಳನ್ನು ಎಡಿಟ್ ಮಾಡಿ ಹಾಕಿ ಜನರಿಗೆ ತಪ್ಪು ಸಂದೇಶ ಕೊಡಲಾಗುತ್ತಿದೆ. ಜೊತೆಗೆ ಹಿಂದು ಧರ್ಮದ ಸಂಕೇತವಾದ ಅರಿಶಿನ ಕುಂಕುಮದ ಬಗ್ಗೆ ಕೆಲವರು ಮಾತನಾಡಿದ್ದಾರೆ. “ಧೈರ್ಯವಿದ್ದರೆ ತನ್ನ ಧರ್ಮವನ್ನು ಪ್ರಶ್ನೆ ಮಾಡಲಿ” ಎಂಬ ಅಸಂಬದ್ಧವಾದ, ಪ್ರಚೋದನೆ ನೀಡುವ ಮಾತುಗಳಾಡಿರುವ ಅವಿವೇಕಿಗಳಿಗೆ, ಎಲ್ಲ ಧರ್ಮಗಳ ಕುರುಡು ಸಾಂಪ್ರದಾಯಿಕತೆ, ಅಂಧಶೃದ್ಧೆ ಮತ್ತು ಮಹಿಳಾವಿರೋಧಿತನವನ್ನು ಬಾನು ಮುಷ್ತಾಕ್ ಅವರು ವಿರೋಧಿಸಿದ್ದು ಮತ್ತು ಆ ಕಾರಣಕ್ಕೆ ತಮ್ಮದೇಧರ್ಮದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಕೂಡಾ ಗೊತ್ತಿಲ್ಲ!!
ಬಾನು ಮುಷ್ತಾಕ್ ರವರು ದಸರಾ ಉದ್ಘಾಟನೆ ಮಾಡುವುದಾದರೆ “ಹಿಂದೂ ಧರ್ಮದ ಆಚರಗಳ ಪಾಲಿಸುವ ಮೂಲಕ ಉದ್ಘಾಟನೆ ಮಾಡಲಿ” ಎಂಬ ಅತಿರೇಕದ ಮಾತುಗಳ ಮೂಲಕ ಇಡೀ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುವ ಮತ್ತು ಕೋಮುವಾದವನ್ನು ಬೆಳೆಸುವ ಹುನ್ನಾರವನ್ನು ಧಾರ್ಮಿಕ ಮೂಲಭೂತವಾದಿಗಳು ರಚಿಸುತ್ತಿದ್ದಾರೆ.
ಈ ನಾಡಿಗೆ ಗೌರವ ತಂದುಕೊಟ್ಟ ಹಿರಿಯ ಸಾಹಿತಿ, ಸಮಾಜಪರ ಚಿಂತನೆಯೊಂದಿಗೆ ಕನ್ನಡ ನಾಡಿನ ಒಳಿತಿಗಾಗಿ ಶ್ರಮಿಸಿರುವ ಮಹಿಳೆಯೊಬ್ಬರನ್ನು ಅಗೌರವದಿಂದ ನಡೆಸಿಕೊಳ್ಳುವ ಮಟ್ಟಕ್ಕೆ ಬೌದ್ದಿಕ ಮತ್ತು ಮಾನಸಿಕ ದಾರಿದ್ರ್ಯ ಈ ನಾಡನ್ನು ಆವರಿಸುತ್ತಿರುವುದು ಬಹಳ ಕೆಟ್ಟಬೆಳವಣಿಗೆ. ಇದನ್ನು ಮಹಿಳಾ ಮುನ್ನಡೆ ಸಂಘಟನೆ ಮತ್ತು ಸೌಹಾರ್ದಪರ ಮನಸ್ಸುಗಳು ಖಂಡಿಸುತ್ತಿದ್ದೇವೆ.
ಮೈಸೂರು ದಸರಾ ಹಬ್ಬ ನಾಡ ಹಬ್ಬವಾಗಿದ್ದು ಇದು ಯಾವುದೊ ಒಂದು ಜಾತಿಯ ಅಥವಾ ಧರ್ಮಕ್ಕೆ ಸೀಮಿತವಾದುದ್ದಲ್ಲ. ಸಮಸ್ತ ನಾಡಿನ ಜನತೆಯ ಹಬ್ಬವಾಗಿದೆ. ಈ ಹಬ್ಬ ಸಾಮರಸ್ಯದ ಸಂಕೇತವಾಗಿದ್ದು, ಜನರು ಜಾತಿ ಬೇಧ ಮರೆತು ಭಾಗವಹಿಸುತ್ತಾರೆ. ಅಂದಮೇಲೆ ಇದಕ್ಕೆ ಧರ್ಮದ ಲೇಪನ ಹಚ್ಚುವುದು ನಿಲ್ಲಬೇಕು.
ನೆರೆರಾಜ್ಯಗಳಿಂದ ಮಾತ್ರವಲ್ಲದೆ ಬೇರೆ ದೇಶಗಳಿಂದಲೂ ದಸರಾವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಈ ಸಾಂಸ್ಕ್ರತಿಕ ಹಬ್ಬದ ಉದ್ಘಾಟನೆಯನ್ನು ನಾಡಿಗೆ ಬೂಕರ್ ಪ್ರಸಸ್ತಿ ತಂದುಕೊಡುವ ಮೂಲಕ ನಾಡಿನ ಹಿರಿಮೆಯನ್ನು ಹೆಚ್ಚಿಸಿದ ಬಾನು ಮುಷ್ತಾಕ್ ರವರು ಮಾಡುವುದು ಗೌರವವೇ ಸರಿ.
ಒಬ್ಬ ಹೆಣ್ಣು ಮಗಳ ಸಾಧನೆಯನ್ನು ಕೋಮುವಾದದ ಮತ್ತು ಧರ್ಮದ ನೆಲೆಗಟ್ಟಿನಲ್ಲಿ ಚರ್ಚೆಗೆಳೆದು ವಿಷಬೀಜ ಬಿತ್ತುವ ಮನ್ನಸ್ಸಿನೊಳಗೂ, ಬಾನು ಮುಷ್ತಾಕ್ ರವರ ಉದ್ಘಾಟನಾ ಮಾತುಗಳ ಮತ್ತು ಅವರು ಹಚ್ಚುವ ಹಣತೆಯ ಸೌಹಾರ್ದತೆಯ ಬೆಳಕು ಪಸರಿಸಲಿ. ಕವಿ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಾಲುಗಳು ನಾಡಹಬ್ಬ ದಸರಾದಲ್ಲಿ ಮತ್ತೊಮ್ಮೆ ಪ್ರತಿಧ್ವನಿಸುವಂತಾಗಲಿ.




