ಮಂಡ್ಯ ತಾಲೂಕಿನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಜಿ.ಮಲ್ಲೀಗೆರೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿ ಯಿಂದ 7.50 ಕೋಟಿ ರೂ.ವೆಚ್ಚದಲ್ಲಿ ಜಿ.ಮಲ್ಲೀಗೆರೆ ಯಿಂದ ಅನುಕುಪ್ಪೆ ಸಂಪರ್ಕ ಕಲ್ಪಿಸುವ ಲೋಕಪಾವನಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ, ಜಿ.ಮಲ್ಲಿಗೆರೆ ಯಿಂದ ಹೊನ್ನೆಮಡುಗೆ ಹೋಗುವ ಬಳಿ ಲೋಕ ಪಾವನಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಜಿ.ಮಲ್ಲಿಗೆರೆ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಎರಡು ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಒಂದು ಕೋಟಿ ರೂ.ವೆಚ್ಚದಲ್ಲಿ ಹೇಮಾವತಿ ಇಲಾಖೆ ಇಂಜಿನಿಯರ್ ವಿಭಾಗದ ವತಿಯಿಂದ ಕೆರೆ ಹೂಳೆತ್ತುವ ಅಭಿವೃದ್ಧಿ ಕಾಮಗಾರಿಗು ಚಾಲನೆ ನೀಡಲಾಗುವುದು ಎಂದು ಹೇಳಿದರು.
ಜಿ.ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಿಂದುಳಿ ದಿರುವ ಪಂಚಾಯಿತಿಯಾಗಿದ್ದು ಈ ಭಾಗದ ರಸ್ತೆ ಅಭಿವೃದ್ಧಿ ಜೊತೆ ಇಲ್ಲಿನ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯಕ್ರಮ ರೂಪಿಸಲಾಗುವುದು. ನಿಮ್ಮೆಲ್ಲರ ಸಹಕಾರ ಇದೇ ರೀತಿ ಇರಲಿ ಆದಷ್ಟು ಬೇಗ ಕಾಮಗಾರಿ ಶೀಘ್ರವಾಗಿ ಮುಗಿದು ಜನರಿಗೆ ಅನುಕೂಲವಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೊನ್ನೇಮಡು ಗ್ರಾಮ ಪರಿಮಿತಿಯಲ್ಲಿ 25 ಲಕ್ಷ ರು.ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೀರಪ್ಪ, ಮಾಜಿ ಸದಸ್ಯರಾದ ಪುಟ್ಟರಾಜು, ಶಿವಕುಮಾರ್, ಕಾಂಗ್ರೆಸ್ ಮುಖಂಡ ಪಿ.ಎಸ್. ಆತ್ಮಾನಂದ,ರಾಮೇಗೌಡ ರಮೇಶ್,ಪರಮೇಶ್, ದೊರೆಸ್ವಾಮಿ,ಕೃಷ್ಣೇಗೌಡ,ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಮ್ರಾನ್ ಖಾನ್,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಈಶ್ವರ್,ಸಹಾಯಕ ಎಂಜಿನಿಯರ್ ಕಿರಣ್ ಸೇರಿದಂತೆ ಇತರರು ಭಾಗವಹಿಸಿದರು.




