ನಾಗರ ಪಂಚಮಿಯಂದು ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡದೆ ಅನಾಥ ಮಕ್ಕಳಿಗೆ, ರೋಗಿಗಳಿಗೆ ಹಾಲು ಕೊಟ್ಟು ಮಾನವತೆ ಮೆರೆಯಬೇಕೆಂದು ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮನವಿ ಮಾಡಿದರು.
ಮಂಡ್ಯ ನಗರದ ಹೊಸಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬಸವಫೌಂಡೇಶನ್, ಮಾನವಬಂಧುತ್ವ ವೇದಿಕೆ ಹಾಗೂ ಕಾಯಕಯೋಗಿ ಸಮೂಹ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಬಸವಪಂಚಮಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಿ ಅವರು ಮಾತನಾಡಿದರು.
ಪುರೋಹಿತ ಶಾಹಿಗಳು ಅರ್ಥವಿಲ್ಲದ ಆಚರಣೆ ಸೃಷ್ಠಿಸಿ ಪುರಾಣ ಕಥೆಗಳ ಮೂಲಕ ವೈಭವಿಕರಿಸಿ ಜನರಲ್ಲಿ ಭಯ ಮೂಡಿಸಿ ಮೌಢ್ಯವನ್ನು ಹೆಚ್ಚಿಸುವ ನಾಗಪಂಚಮಿಯಂತಹ ಮೌಢ್ಯ ಇನ್ನೂ ಮುಂದುವರಿದಿರುವುದು ವಿಷಾದನೀಯ ಎಂದರು.
ವಿಜ್ಞಾನ ಯುಗದಲ್ಲಿ ಮೂಢನಂಬಿಕೆ
ಮಾನವಬಂಧುತ್ವ ವೇದಿಕೆ ಅಧ್ಯಕ್ಷರಾದ ದೇವರಾಜ್ ಕೊಪ್ಪ ಮಾತನಾಡಿ, ಭಾರತೀಯ ಸಮಾಜ ಇಂದಿನ ವಿಜ್ಞಾನ ಯುಗದಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಯ ಸಮೂಹ ಸನ್ನಿಗೆ ಒಳಗಾಗಿ ಧ್ವನಿ ಕಳೆದುಕೊಂಡಿದ್ದು ಇದರ ವಿರುದ್ಧ ಹನ್ನೆರಡನೇ ಶತಮಾನದಲ್ಲೇ ವಿಶ್ವಗುರು ಬಸವಣ್ಣನವರು ಧ್ವನಿ ಎತ್ತಿದ್ದಾರೆ. ಅವರ ಆದರ್ಶಗಳನ್ನು ಅನುಸರಿಸಬೇಕೆಂದರು.
ನಾಗಪಂಚಮಿ ದಿನ ಕಲ್ಲುನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನೆರೆಯುವುದು ಎಷ್ಟು ಸಮಂಜಸ ಎನ್ನುವ ಯೋಚನೆ ಮಾಡಬೇಕಿದೆ. ಈ ಹಿಂದೆ ನಾಗರಪಂಚಮಿ ಸಹೋದರಿಯರ, ಒಡಹುಟ್ಟಿದವರ ಹಬ್ಬವೆಂದು ಆಚರಿಸುತ್ತಿದ್ದರು. ತದನಂತರ ಪುರೋಹಿತ ಶಾಹಿ ವರ್ಗ ದೇವರ ಹೆಸರಲ್ಲಿ ಅನೇಕ ಮೌಢ್ಯಾಚರಣೆಗಳನ್ನು ಜಾರಿಗೆ ತಂದಿದ್ದು ಜನ ಜಾಗೃತರಾಗಬೇಕೆಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದ ದಿನವನ್ನು ಮರೆಮಾಚುವ ಸಲುವಾಗಿ ನಾಗಪಂಚಮಿಯನ್ನು ಆಚರಿಸಿ ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವನ್ನು ಕೆಲವೊಂದು ವರ್ಗ ವ್ಯವಸ್ಥಿತವಾಗಿ ಕಟ್ಟುಕಥೆಗಳನ್ನು ಹೇಳುವ ಮೂಲಕ ಜನರನ್ನು ನಂಬಿಸುತ್ತಿದ್ದಾರೆ. ಇಂತಹ ಹಲವು ಮೂಢನಂಬಿಕೆಗಳನ್ನು ಜನರ ಮನಸಲ್ಲಿ ಬೇರೂರುವಂತೆ ಮಾಡಿರುವ ಸಂಪ್ರದಾಯವಾದಿಗಳ ಆಚರಣೆಯನ್ನು ಕಿತ್ತೊಗೆಯಬೇಕೆಂದರು.
ಕಲ್ಲನಾಗರಕಂಡರೆ ಹಾಲನೆರೆ ಎಂಬರು ದಿಟದ ನಾಗರಕಂಡರೆ ಕೊಲ್ಲೆಂಬರಯ್ಯ ಎಂಬ ವಚನದ ಸಾರದಂತೆ ಬಸವಣ್ಣನವರು ನಾಗರಪಂಚಮಿಯ ಆಚರಣೆಯನ್ನು ೯೦೦ ವರ್ಷಗಳ ಹಿಂದೆಯೇ ವಿರೋಧಿಸಿ ಮೌಢ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಶಿವಶರಣರ ಆಶಯಗಳನ್ನು ಅರ್ಥಮಾಡಿಕೊಂಡಲ್ಲಿ ಸಾಮರಸ್ಯ ಜೀವನ ಸಾಧ್ಯ ಎಂದರು.
ನಾಗಪಂಚಮಿಯಂದು ಮೌಢ್ಯದಿಂದ ದೇವರ ಹೆಸರಲ್ಲಿ ಹಾಲನೆರೆದರೆ ಹಾವು ಸಾಯುತ್ತದೆ. ಕಪ್ಪೆ, ಹಲ್ಲಿ, ಹುಳು, ಇಲಿಯನ್ನು ತಿಂದು ಬದುಕುವ ಹಾವಿಗೆ ಹಾಲೆರೆದು ಅರಿಶಿನ, ಕುಂಕುಮ, ನೀರನೆರೆದು ಅದರ ಸಾವಿಗೆ ಕಾರಣವಾಗುವ ಬದಲು ಹಸಿದವರಿಗೆ ಹಾಲಿನಂತಹ ಪೌಷ್ಠಿಕವಾದ ಆಹಾರವನ್ನು ನೀಡಬೇಕೆಂದು ಕೋರಿದರು.
ಬಸವ ಫೌಂಡೇಶನ್ ಅಧ್ಯಕ್ಷೆ ಎಚ್.ಪಿ.ಅಪರ್ಣ ಅವರು ಶಾಲಾಮಕ್ಕಳಿಗೆ ವಚನದ ಸಾರವನ್ನು ತಿಳಿಸಿ ಹಾಲು ಹಣ್ಣು ವಿತರಿಸಿದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಜಿ.ಮಹಾಂತಪ್ಪ, ಹೊಸಹಳ್ಳಿ ಶಿವು, ಜಯಸುಧಾ, ರವಿತೇಜ್, ಎಚ್.ಪಿ.ಸಾಗರ್, ಶಾಲೆಯ ಮುಖ್ಯಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.




