ಉತ್ತರ ಪ್ರದೇಶವನ್ನು ಸಂಸತ್ತಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತೆ. 80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶವನ್ನು ಗೆದ್ದವರು ದೆಹಲಿಯಲ್ಲಿ ಅಧಿಕಾರ ಹಿಡಿಯುತ್ತಾರೆ ಎಂಬುದು ಮೊದಲಿನಿಂದಲೂ ನಿಶ್ಚಿತವಾದ ಸಂಗತಿಯಾಗಿದೆ.
ಆದರೆ ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ 30 ರಿಂದ 35 ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಪಡೆಯುವುದಿಲ್ಲವೆಂದು ಕೆಲವು ಸಮೀಕ್ಷೆಗಳು ಹೇಳುತ್ತಿದ್ದು, ಒಂದು ವೇಳೆ ಬಿಜೆಪಿ ಉತ್ತರಪ್ರದೇಶದಲ್ಲಿ ಕೇವಲ 30 ಸ್ಥಾನ ಪಡೆದು ಕಳಪೆ ಪ್ರದರ್ಶನ ನೀಡಿದರೆ ದೆಹಲಿಯಲ್ಲಿ ಸರ್ಕಾರ ರಚಿಸುವ ಆಸೆಯನ್ನು ಕೈ ಚೆಲ್ಲ ಬೇಕಾಗುತ್ತೆ ಎಂಬ ಚರ್ಚೆಗಳು ಪ್ರಾರಂಭವಾಗಿವೆ.
2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 80 ಸ್ಥಾನಗಳ ಪೈಕಿ 62ರಲ್ಲೂ ಅದರ ಮಿತ್ರ ಪಕ್ಷ ಅಪ್ನಾದಳ 2 ಕ್ಷೇತ್ರದಲ್ಲಿ ಜಯ ಗಳಿಸಿತ್ತು.ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ರಾಮಮಂದಿರ ವಿಚಾರವನ್ನು ಮುಂದಿಟ್ಟುಕೊಂಡು ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದು ಬಿಜೆಪಿ ಪ್ರಚಾರದಲ್ಲಿ ತೊಡಗಿತ್ತು.ಆದರೆ ಚುನಾವಣಾ ಕಣ ರಂಗೇರುತ್ತಿದ್ದಂತೆ ಮೋದಿ,ರಾಮಮಂದಿರ ವಿಚಾರಗಳಿಗಿಂತ ನಿರುದ್ಯೋಗ ಸಮಸ್ಯೆ,ಅಗ್ನಿ ವೀರ್, ಬೆಲೆಯೇರಿಕೆ ವಿಚಾರಗಳು ಮುನ್ನಲೆಗೆ ಬಂದು ಉತ್ತರ ಪ್ರದೇಶದಲ್ಲಿ ಈ ಬಾರಿ ಕಳೆದ ಬಾರಿಗಿಂತ ಬಿಜೆಪಿ ಸ್ಥಾನಗಳು ಕೆಳಕ್ಕಿಳಿಯಲಿದೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.
ಉತ್ತರ ಪ್ರದೇಶದಲ್ಲಿ ಜೂನ್ 1 ರಂದು ಕೊನೆಯ ಹಂತದಲ್ಲಿ 13 ಸ್ಥಾನಗಳಿಗೆ ಚುನಾವಣೆಗಳು ನಡೆಯಲಿದ್ದು,ಫಲಿತಾಂಶ ಏನಾಗುವುದೋ ಎಂಬುದು ಕುತೂಹಲ ಮೂಡಿಸಿದೆ.




