ಮಂಡ್ಯದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ದಂಧೆಯಲ್ಲಿ ತೊಡಗಿದ್ದ ಆರೋಪಿ ವಿರುದ್ದ ಮಂಡ್ಯದ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರುನಾಡು ಸೇವಕರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯದಲ್ಲಿ ಬೀದಿಗಿಳಿದು ಹೋರಾಟ ನಡೆಸಿದ ಫಲವಾಗಿ, ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಿ, ನಾಗೇಂದ್ರ ಎಂಬಾತನ ಮೇಲೆ ನ.4 ರಂದು ಎಫ್ಐಆರ್ ದಾಖಲಾಗಿದೆ.
ಬೆಟ್ಟಿಂಗ್ ದಂಧೆಗೆ ಪ್ರೇರೆಪಿಸುತ್ತಿದ್ದ ಆರೋಪದ ಮೇಲೆ ಮಳವಳ್ಳಿ ತಾಲ್ಲೂಕು ಕಿರುಗಾವಲು ಹೋಬಳಿಯ ಟಿ.ಕಾಗೇಪುರದ ನಾಗೇಂದ್ರ ಕೆ.ಸಿ (29) ಎಂಬುವನ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ ನಲ್ಲಿ ಏನೀದೆ…. ?
ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಟಿ.ಕಾಗೇಪುರದ ರಾಜಣ್ಣ (64) ಎಂಬುವರು ದೂರು ನೀಡಿದ್ದು, ತಮ್ಮ ಮಗ ಪ್ರೀತಮ್ ಎಂಬುವನನ್ನು ಬೆಟ್ಟಿಂಗ್ ಬುಕ್ಕಿಯಾದ ನಾಗೇಂದ್ರ ಅಕ್ರಮ ಬೆಟ್ಟಿಂಗ್ ದಂಧೆಗೆ ಇಳಿಸಿದ್ದ ಎಂದು ದೂರಿದ್ದಾರೆ.
ನನಗೆ ಇಬ್ಬರು ಮಕ್ಕಳು, ಅವರಲಿ, 2ನೇ ಮಗನಾದ ಪ್ರೀತಮ್ ಆರ್. ಗೌಡ, 26ವರ್ಷದವನು ನನ್ನ ಜೊತೆ ವ್ಯವಸಾಯ ಮಾಡಿಕೊಂಡು ಇರುತ್ತಾನೆ, ನಮ್ಮ ಊರಿನ ಕೆ.ಸಿ.ನಾಗೇಂದ್ರ ಬಿನ್ ಲೇಟ್ ಚಿಕ್ಕಲಿಂಗಯ್ಯ ಎಂಬುವನು ಕ್ರಿಕೆಟ್ ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುವ ಬುಕ್ಕಿ ಎಂದು ಪರಿಚಯ ಮಾಡಿಕೊಂಡಿದ್ದ. ಅವನು ನನ್ನ ಮಗನಿಗೆ Digital Website Game Of Chance ಮೂಲಕ ದಿಢೀರ್ ಶ್ರೀಮಂತಿಕೆಯ ಆಮಿಷ ಒಡ್ಡಿ ನನ್ನ ಮಗನ ತಲೆ ಕೆಡಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವುದರಲ್ಲಿ ತೊಡಗುವಂತೆ ಕುಮ್ಮಕ್ಕು ನೀಡಿದ್ದ ಎಂದು ರಾಜಣ್ಣ ಪ್ರಸ್ತಾಪಿಸಿದ್ದಾರೆ.
ಹಳ್ಳಿ, ಮುಗ್ಥ ವ್ಯವಸಾಯಗಾರನಾದ ನನ್ನ ಮಗನನ್ನು ಕ್ರಿಕೆಟ್ ಬೆಟ್ಟಿಂಗ್ ಗೆ ದಾಸನಾಗುವಂತೆ ನಾಗೇಂದ್ರ ಮಾಡಿರುತ್ತಾನೆ. LORDS EXCH ಮತ್ತು ಇತ್ಯಾದಿ Digital Online Website ಗಳ ಮೂಲಕ 2021 ಡಿಸೆಂಬರ್ ತಿಂಗಳಿನಿಂದ 2023 ಡಿಸೆಂಬರ್ ತಿಂಗಳಿನವರೆಗೆ ನನ್ನ ಮಗನಿಗೆ ವ್ಯಾಟ್ಸ್ ಆಫ್ ನಂಬರ್ 8971279038 ಮೂಲಕ ಪಾಸ್ ವರ್ಡ್ ಪಿನ್ ನಂಬರ್ ನೀಡಿ, ನನ್ನ ಮಗನ ಸರಿ ಸುಮಾರು ರೂ 20,00,000/-(ಇಪ್ಪತ್ತು ಲಕ್ಷ) ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಜೂಜು ಆಡಿ ಹಣ ಕಳೆದುಕೊಳ್ಳುವಂತೆ ಮಾಡಿರುತ್ತಾನೆ ಎಂದು ದೂರಿದ್ದಾರೆ.
ತದನಂತರ ಹಣವನ್ನು ವಸೂಲಿ ಮಾಡಲು ಬ್ಲಾಕ್ ಮೇಲ್ ಮೂಲಕ ಅಕ್ರಮವಾಗಿ ಹಣ ಸುಲಿಗೆ ಮಾಡಿರುತ್ತಾನೆ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೋ… ಮಗನೇ ನೀನು ಬದುಕಿರುವುದಕ್ಕಿಂತ ಸಾಯುವುದೇ ಲೇಸು, ಹೋಗಿ ಸಾಯಿ ಎಂದು ನನ್ನ ಮಗನಾದ ಪ್ರೀತಮ್.ಆರ್.ಗೌಡ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುತ್ತಾನೆ ಎಂದು ರಾಜಣ್ಣ ತಿಳಿಸಿದ್ಧಾರೆ.
ನಾನು ಅನಕ್ಷರಸ್ಥನೂ ವ್ಯವಸಾಯಗಾರನು ಆಗಿದ್ದು, ಹಲವು ಬಾರಿ ನಾಗೇಂದ್ರನಿಗೆ ಈ ಜೂಜಾಟದಲ್ಲಿ ನನ್ನ ಮಗನನ್ನು ತೊಡಗಿಸಬೇಡ ಎಂದು ಎಚ್ಚರಿಕೆ ನೀಡಿದ್ದರು. ಕೇಳದೇ ಲಕ್ಷಾಂತರ ಹಣವನ್ನು ಕಮೀಷನ್ ಆಸೆಗಾಗಿ ಜೂಜಿನಲ್ಲಿ ತೊಡಗಿಸುವಂತೆ ಮಾಡಿರುತ್ತಾನೆ. ಕೆ.ಸಿ.ನಾಗೇಂದ್ರ ಎಂಬುವನು ನನ್ನ ಮಗನಿಂದ ಕರ್ನಾಟಕ ಬ್ಯಾಂಕ್ ಮಳವಳ್ಳಿ ಶಾಖೆಗೆ ಸೇರಿದ ಚೆಕ್ ನಂ.553071 ಖಾಲಿ ಚೆಕ್ ಮತ್ತು ಆನ್ ಡಿಮಾಂಡ್ ಪತ್ರ ಒಂದಕ್ಕೆ ಬಲವಂತವಾಗಿ ಸಹಿ ಪಡೆದಿರುತ್ತಾನೆ, ಆದ್ದರಿಂದ ನಮ್ಮ ಕುಟುಂಬದವರು ದಿನವೂ ಜೀವ ಕೈಯಲ್ಲಿ ಹಿಡಿದು ಬದುಕುವಂತೆ ಮಾಡಿರುತ್ತಾನೆ, ಮೌಖಿಕವಾಗಿ ನಾನು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿರುತ್ತೇನೆ, ಈ ದಿನ ಅಂದರೇ ದಿನಾಂಕ: 04-11-2024 ರಂದು ಬೆಳಿಗ್ಗೆ 8.30 ರಲ್ಲಿ, ಮತ್ತೆ ನನ್ನ ಮಗನಿಗೆ ಬೆಟ್ಟಿಂಗ್ ಬಾಕಿ ಹಣ ಕೊಡುವಂತೆ ಕೇಳಿರುತ್ತಾನೆ. ಆ ಸಂದರ್ಭ, ಸುತ್ತಮುತ್ತಲಿನವರು ನನ್ನ ಮಗನನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ವಿವರಿಸಿದ್ದಾರೆ.
ಕ್ರಿಕೆಟ್ ಬುಕ್ಕಿಯಾಗಿ ಜೂಜಾಟ ಆಡಿಸುತ್ತಿರುವ ಅಕ್ರಮ ಹಣ ಸಂಪಾದನೆ ದಂಧೆಯಲ್ಲಿ ತೊಡಗಿರುವ ಅಕ್ರಮವಾಗಿ ಪುಸಲಾಯಿಸಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಕೆ.ಸಿ.ನಾಗೇಂದ್ರ ಎಂಬುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಿ ನನ್ನ ಮಗನಿಗೆ ಆಗಿರುವ ಆನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ಎನ್.ಸಿ.ಆರ್. ದಾಖಲಿಸಿದ್ದ ಪೊಲೀಸರು
ಕಳೆದ 4 ತಿಂಗಳ ಹಿಂದೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಣ್ಣ ಎಂಬುವವರು ದೂರು ದಾಖಲಿಸಿ, ತಮ್ಮ ಮಗ ಪ್ರೀತಂ ಎಂಬುವವನನ್ನು ನಾಗೇಂದ್ರ ಬೆಟ್ಟಿಂಗ್ ದಂಧೆಗೆ ಇಳಿಸಿದ್ದಾನೆ ಎಂದು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಮಳವಳ್ಳಿ ಪೊಲೀಸರು ಕೇವಲ ಎನ್.ಸಿ.ಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು.
ಫಲ ನೀಡಿದ ಪ್ರತಿಭಟನೆ

ಸೋಮವಾರ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತುರ್ತು ಸಭೆ ನಡೆಸಿದಾಗ ಸ್ವತಃ ದೂರುದಾರ ರಾಜಣ್ಣ, ಈ ಘಟನೆಯ ಬಗ್ಗೆ ವಿವರಿಸಿ, ಎಫ್ಐಆರ್ ದಾಖಲಿಸದ ಪೊಲೀಸರ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಅವರು, ಇಂದೇ ಆರೋಪಿ ವಿರುದ್ದ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಭರವಸೆ ನೀಡಿದ್ದರು, ಅದರಂತೆ ಎಫ್ಐಆರ್ ದಾಖಲಾಗಿದೆ.
ಹೆಲ್ಪ್ ಲೈನ್ ಪ್ರಾರಂಭಿಸಲು ಚಿಂತನೆ
ಬೂದನೂರು ಯುವಕನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಂಡ್ಯ ಜಿಲ್ಲಾಡಳಿತಯು ಬೆಟ್ಟಿಂಗ್ ಬಾದಿತರಿಗೆ ಮತ್ತು ಬೆಟ್ಟಿಂಗ್ ದಂಧೆ ಮಾಡುತ್ತಿರುವವರ ಬಗ್ಗೆ ಮಾಹಿತಿ ನೀಡಲು ಹೆಲ್ಪ್ ಲೈನ್ ಪ್ರಾರಂಭಿಸುವುದಾಗಿ ಚಿಂತನೆ ನಡೆಸಿದೆ. ಇದು ಬೇಗ ಅನುಷ್ಟಾನಗೊಂಡರೆ ಮಂಡ್ಯ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಬೆಟ್ಟಿಂಗ್ ದಂಧೆಗೆ ಕಡಿವಾಣಹಾಕಿದಂತಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ನೇರವಾಗಿ ದೂರು ಸಲ್ಲಿಸಿ
ಈಗಾಗಲೇ ಬೆಟ್ಟಿಂಗ್ ನಿಂದ ಕಿರುಕುಳ ಅನುಭವುಸುತ್ತಿರುವವರು, ಬೆಟ್ಟಿಂಗ್ ಬುಕ್ಕಿಗಳು-ದಂಧೆಕೋರರಿಂದ ಬೆದರಿಕೆಗೆ ಒಳಗಾಗಿರುವವರು ನೇರವಾಗಿ ತಮಗೆ ದೂರು ಸಲ್ಲಿಸಬಹುದೆಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ, ಎಲ್ಲೆಲ್ಲಿ ಇಸ್ಪಿಟ್ ಅಡ್ಡಗಳು, ಬುಕ್ಕಿಂಗ್ ದಂಧೆಗಳು ನಡೆಯುತ್ತಿವೆಯೋ ಅಲ್ಲಿನ ಪ್ರಜ್ಞಾವಂತರು, ಪೋಷಕರು, ಯುವ ಸಂಘಟನೆಗಳು ತಮ್ಮ ಮಕ್ಕಳ,ಯುವಕರ ಬದುಕಿಗೆ ಪೂರಕವಾಗಿ ಬುಕ್ಕಿಗಳು, ದಂಧೆ ಮಾಡುವವರು ವಿರುದ್ದ ನೇರವಾಗಿ ದೂರು ಸಲ್ಲಿಸಬಹುದು, ಹಾಗೇ ದೂರು ಸಲ್ಲಿಸಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಇದು ಸಾಧ್ಯವಾಗದೇ ಇದ್ದಲ್ಲಿ, ಬೆಟ್ಟಿಂಗ್ ದಂಧೆ ವಿರುದ್ದ ವಿವಿಧ ಸಂಘಟನೆಗಳ ಮುಖಂಡರಿಗೆ ಮಾಹಿತಿ ನೀಡುವಂತೆ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ. ಜೂಜು ದಂಧೆಯಿಂದ ನೊಂದವರು ಆತ್ಮಹತ್ಯೆ ದಾರಿ ಹಿಡಿಯಬೇಕಿಲ್ಲ, ಧೈರ್ಯವಾಗಿ ದೂರು ನೀಡಿ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ
ಬೂದನೂರು ಯುವಕನ ಆತ್ಮಹತ್ಯೆ ಪ್ರಕರಣದ ನಂತರ ಮಂಡ್ಯ ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಸುವವರ, ಪ್ರಚೋದಿಸುವವರ ವಿರುದ್ದ ದೊಡ್ಡ ಹೋರಾಟವೇ ಶುರವಾಗಿದ್ದು, ಪ್ರಗತಿಪರ ಸಂಘಟನೆಗಳು ಬೀದಿಗಿಳಿದಿವೆ, ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೇ ರೀತಿ ಹಲವು ಪ್ರಕರಣಗಳು ಬೆಳಕಿಗೆ ಬರಲಿವೆ ಎಂಬ ಮಾಹಿತಿ ತಿಳಿದು ಬಂದಿದೆ.
ನಿಯಂತ್ರಣಕ್ಕೆ 15 ದಿನಗಳ ಗಡುವು
ಇನ್ನೂ 15 ದಿನಗಳಲ್ಲಿ ಪೋಲಿಸ್ ವ್ಯವಸ್ಥೆ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕದಿದ್ದರೆ, ಇಸ್ಪೀಟ್ ಅಡ್ಡಗಳು, ಹುಕ್ಕಾ, ಡ್ರಗ್, ಬೆಟ್ಟಿಂಗ್ ಮಾಡುತ್ತಿರುವ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುತ್ತೇವೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ನುಡಿ ಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ನ ಕರಾಳ ಮುಖವನ್ನು ದಾಖಲೆಗಳ ಸಮೇತ ವಿವರಿಸಿದ್ದಾರೆ ಸರೋವರ್ ಬೆಂಕಿಕೆರೆ




