ನಾಡು ಕಂಡ ಮಹನೀಯರಲ್ಲಿ ಒಬ್ಬರಾದ ಭಗೀರಥರ ತತ್ವ, ಸಿದ್ಧಾಂತ,ಮೌಲ್ಯ ಆದರ್ಶಗಳನ್ನು ಸಮಾಜ ಅನುಸರಿಸಬೇಕು ಎಂದು ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಹೇಳಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿಯ ಕಾರ್ಯಕ್ರಮವನ್ನು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆ ಮತ್ತು ದೃಢತೆ ಭಗೀರಥ ಮಹರ್ಷಿಗಳಿಗೆ ಅಗಾಧವಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಶಾಲೆ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸ್ಥಾಪನೆ ಮಾಡಲು ಸರ್ಕಾರ ಸದಾ ಚಿಂತಿಸುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎನ್.ನರಸಿಂಹಮೂರ್ತಿ ವಿಶೇಷ ಉಪನ್ಯಾಸ ನೀಡಿ, ಸೂರ್ಯವಂಶದವರಾದ ಭಗೀರಥ ಮಹರ್ಷಿ ತನ್ನ ಪೂರ್ವಜರ ಆತ್ಮಗಳ ಸದ್ಗತಿಗಾಗಿ ಹಾಗೂ ಗುರುಗಳ ಸೂಚನೆಯ ಮೇರೆಗೆ ಬ್ರಹ್ಮ ದೇವರ ಕುರಿತು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ, ಬ್ರಹ್ಮ ದೇವರು ಭಗೀರಥರ ತಪಸ್ಸಿಗೆ ಮಣಿದು ಪ್ರತ್ಯಕ್ಷವಾಗಿ ತನ್ನ ಕಮಂಡಲದಿಂದ ಧರೆಗೆ ಬೀಳುವ ಗಂಗೆಯ ರಭಸವನ್ನು ಭೂಮಿಯಿಂದ ತಡೆಯಲು ಸಾಧ್ಯವಿಲ್ಲ, ಆದರಿಂದ ನೀನು ಶಿವನನ್ನು ಪ್ರಾರ್ಥಿಸು ಎಂದು ಹೇಳುತ್ತಾರೆ.

ಅದರಂತೆ ಭಗೀರಥ ಮಹರ್ಷಿಗಳು ಶಿವನನ್ನು ಕುರಿತು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ, ಭಗೀರಥರ ಭಕ್ತಿ ಮೆಚ್ಚಿ ಪರಶಿವ ತನ್ನ ಜಡೆಯನ್ನು ಭೂ ಮಂಡಲದ ಸುತ್ತಿ ಗಂಗೆಯ ರಭಸವನ್ನು ತಡೆದು ಭೂಮಿಗೆ ಗಂಗೆಯನ್ನು ಕರೆಸುವ ಮೂಲಕ ತನ್ನ ಪೂರ್ವಜರ ಆತ್ಮಗಳಿಗೆ ಸದ್ಗತಿ ಸಿಗುವಂತೆ ಮಾಡುತ್ತಾರೆ ಎಂದು ಹೇಳಿದರು.
ನಾವೆಲ್ಲರೂ ಭಗೀರಥ ಮಹರ್ಷಿಗಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು, ಗಂಗೆಯನ್ನು ಧರೆಗೆ ಹರಿಸುವ ಮೂಲಕ ಜನ ಜೀವಿಗಳ ದಾಹ ತಣಿಸಿದರು, ಜನಸಾಮಾನ್ಯರ ಬದುಕು ಹಸನ್ನಾಗಿಸಿದರು ಎಂದು ಹೇಳಿದರು.
ನಂತರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು,
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ವಿ ನಂದೀಶ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಅದಾನಂದ, ಉಪ್ಪಾರ ಸಮುದಾಯದ ಜಿಲ್ಲಾಧ್ಯಕ್ಷೆ ನಾಗರತ್ನ ಉಪ್ಪಾರ್, ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಹಾಗೂ ಮುಖಂಡರುಗಳಾದ ಡಾ.ಎಂ ವೆಂಕಟೇಶ್, ಟಿ.ಡಿ ನಾಗರಾಜ್, ಅಮ್ಜದ್ ಪಾಷಾ, ಬಿ.ಟಿ.ಗುರುರಾಜ್, ಬಿ.ಎಸ್ ಅನುಪಮ, ಎಸ್ ನಾರಾಯಣ್, ಪೂರ್ಣಚಂದ್ರ, ನರಸಿಂಹಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆ
ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಭಗೀರಥರ ಭಾವಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಬಿ.ವಿ. ನಂದೀಶ್ ಅವರು ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿಯಿಂದ ಡೊಳ್ಳುಕುಣಿತದ ಮೂಲಕ ಮೆರವಣಿಗೆ ಜಿಲ್ಲಾ ಪಂಚಾಯತ್ ಕಚೇರಿಯನ್ನು ಮೆರವಣಿಗೆ ತಲುಪಿತು.




