-
ಮಳವಳ್ಳಿ ತಾಲೂಕು ಬಿಜೆಪಿ ನಾಯಕರಲ್ಲಿ ಭಿನ್ನಮತ
- ಈ ಬಾರಿ ಬಿಜೆಪಿ ಬಿ.ಫಾರಂಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು
- ಬಿಜೆಪಿ ಕಚೇರಿಯ ಗದ್ದಲದಿಂದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಇರಿಸುಮುರಿಸು
ಮಳವಳ್ಳಿ ತಾಲೂಕು ಬಿಜೆಪಿ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಿಜೆಪಿ ನಾಯಕರ ಭಿನ್ನಮತೀಯ ಚಟುವಟಿಕೆಗಳಿಂದ ಕಾರ್ಯಕರ್ತರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿ.ಫಾರಂ ಆಕಾಂಕ್ಷಿತರಾಗಿ ಮಾಜಿ ಸಚಿವ ಬಿ. ಸೋಮಶೇಖರ್, ಮುಖಂಡರಾದ ಜಿ. ಮುನಿರಾಜು, ಯಮದೂರು ಸಿದ್ದರಾಜು, ದ್ವಾರನಹಳ್ಳಿ ಕುಮಾರಸ್ವಾಮಿ, ದರ್ಶನ್ ಸೋಮಶೇಖರ್, ಮಧು ಗಂಗಾಧರ್ ಆಕಾಂಕ್ಷಿಗಳಾಗಿದ್ದಾರೆ.
ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಹಣಾಹಣಿ. ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಇಂತಹ ಮಳವಳ್ಳಿಯಲ್ಲಿ ಈ ಬಾರಿ ಬಿಜೆಪಿ ಬಿ.ಫಾರಂಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಬಣ ರಾಜಕೀಯ ನಡೆಯುತ್ತಿದೆ.
ಭುಗಿಲೆದ್ದ ಭಿನ್ನಮತ
ಮಳವಳ್ಳಿ ಕ್ಷೇತ್ರದ ಬಿಜೆಪಿ ಬಿ. ಫಾರಂಗಾಗಿ ಮಾಜಿ ಸಚಿವ ಬಿ.ಸೋಮಶೇಖರ್ ಮುಖಂಡರಾದ ಯಮದೂರು ಸಿದ್ದರಾಜು, ಜಿ.ಮುನಿರಾಜು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಸಚಿವರಾಗಿದ್ದ ಬಿ. ಸೋಮಶೇಖರ್ ಬಿಜೆಪಿ ಸೇರಿ ಕಳೆದ ಚುನಾವಣೆಯಲ್ಲಿ ಹತ್ತು ಸಾವಿರ ಮತ ಪಡೆದಿದ್ದಾರೆ. ಈ ಬಾರಿಯೂ ನನಗೆ ಬಿ. ಫಾರಂ ಕೊಡಿ ಎಂದು ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ.
2013ರ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಜಿ. ಮುನಿರಾಜು 26 ಸಾವಿರ ಮತಗಳನ್ನು ಪಡೆದಿದ್ದರು. ಇವರು ಈ ಬಾರಿ ನನಗೆ ಬಿ. ಫಾರಂ ನೀಡಬೇಕೆಂದು ವರಿಷ್ಠರಿಗೆ ಆಗ್ರಹಿಸಿದ್ದಾರೆ. ಅಲ್ಲದೆ 2008 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 7000 ಮತ ಗಳಿಸಿದ್ದ ಯಮದೂರು ಸಿದ್ದರಾಜು ಬಿಜೆಪಿ ಬಿ.ಫಾರಂ ಗಾಗಿ ಪೈಪೋಟಿ ನೀಡುತ್ತಿದ್ದಾರೆ. ದ್ವಾರನಹಳ್ಳಿ ಕುಮಾರಸ್ವಾಮಿ ಕೂಡ ಬಿಜೆಪಿ ಬಿ.ಫಾರಂಗಾಗಿ ಪ್ರಯತ್ನಿಸಿದ್ದಾರೆ.
ಮಳವಳ್ಳಿ ಬಿಜೆಪಿಯಲ್ಲಿ ಬಿ.ಸೋಮಶೇಖರ್ ಅವರದ್ದು ಒಂದು ಬಣವಾದರೆ, ಜಿ.ಮುನಿರಾಜು, ಯಮದೂರು ಸಿದ್ದರಾಜು,ದ್ವಾರನಹಳ್ಳಿ ಕುಮಾರಸ್ವಾಮಿ ಇವರು ಮತ್ತೊಂದು ಬಣದಲ್ಲಿದ್ದಾರೆ. ಈ ಮೂವರು ನಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಬಿ. ಸೋಮಶೇಖರ್ ನನಗೆ ಬಿ.ಫಾರಂ ನೀಡದಿದ್ದರೆ ನನ್ನ ಪುತ್ರ ದರ್ಶನ್ ಸೋಮಶೇಖರ್ ಹಾಗೂ ಅಣ್ಣನ ಮಗ ಮಧು ಗಂಗಾಧರವರಿಗೆ ಕೊಡಿ ಎಂದು ವರಿಷ್ಠರನ್ನು ಆಗ್ರಹಿಸಿದ್ದಾರೆ.
ಕಛೇರಿ ಗದ್ದಲ
ಬಿ.ಸೋಮಶೇಖರ್ ಅವರ ಸ್ವಂತ ಕಟ್ಟಡದಲ್ಲಿ ಇದುವರೆಗೆ ಬಿಜೆಪಿ ಕಚೇರಿ ಇತ್ತು. ಇದೇ ಪಕ್ಷದ ಅಧಿಕೃತ ಕಚೇರಿ ಎಂದು ಸೋಮಶೇಖರ್ ಹೇಳಿದರೆ, ಮಳವಳ್ಳಿಯ ಮೈಸೂರು ರಸ್ತೆಯಲ್ಲಿ ನವೆಂಬರ್ 18ರಂದು ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟಿಸಿದ ಕಚೇರಿಯೇ ಬಿಜೆಪಿಯ ಅಧಿಕೃತ ಕಚೇರಿ ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಹೇಳುತ್ತಿದ್ದಾರೆ. ಬಿಜೆಪಿ ಕಚೇರಿಯ ಗದ್ದಲದಿಂದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಇರಿಸುಮುರಿಸು ಉಂಟಾಗಿದ್ದು, ಭಿನ್ನಮತ ಭುಗಿಲೆದ್ದಿದೆ.
ಮಳವಳ್ಳಿಯಲ್ಲಿ ಬಿಜೆಪಿ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರರೂ ಈ ಬಾರಿ ಬಿ.ಫಾರಂಗಾಗಿ ಮುಗಿ ಬೀಳುವವರ ಸಂಖ್ಯೆ ದೊಡ್ಡದಾಗಿದ್ದು, ಯಾರಿಗೆ ಬಿ.ಫಾರಂ ಸಿಗುವುದೋ ಎಂಬ ಕುತೂಹಲ ಮಳವಳ್ಳಿ ಜನರಲ್ಲಿ ಮೂಡಿದೆ.




