ಚುನಾವಣೆ ಸಂದರ್ಭದಲ್ಲಿ ಹಣದ ಆಮಿಷಗಳಿಗೆ ಬಲಿಯಾಗದೇ ಯೋಗ್ಯ ವ್ಯಕ್ತಿಗೆ ಮತಹಾಕಬೇಕು, ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಹೊಂದಾಣಿಕೆ ಕರ್ನಾಟಕ ರಾಜ್ಯಕ್ಕೆ ದೊಡ್ಡಶಕ್ತಿ ಬಂದಂತಾಗಿದೆ ರಾಜ್ಯಸಭಾ ಸದಸ್ಯ ಚಿತ್ರನಟ ಜಗ್ಗೇಶ್ ಹೇಳಿದರು.
ಮಳವಳ್ಳಿ ಪಟ್ಟಣದ ಶಾಂತಿ ಸಮುದಾಯ ಭವನದ ಆವರಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಒಕ್ಕಲಿಗ ಸಮುದಾಯದಲ್ಲಿ ಮೊಟ್ಟ ಮೊದಲಭಾರಿಗೆ ಎಚ್ಡಿ ದೇವೇಗೌಡರು ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದರು. ಅವರಪುತ್ರ ಮಂಡ್ಯ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಹೆಚ್ಚಿನ ಮತವನ್ನು ಕೊಟ್ಟು ಗೆಲ್ಲಿಸುವುದರ ಮೂಲಕ ಕೇಂದ್ರ ಸಚಿವರನ್ನಾಗಿ ಕಾಣಬೇಕೆಂದು ಕೋರಿದರು.
ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿದ್ದು, ೨೮ ಕ್ಷೇತ್ರಗಳಲ್ಲಿ ಪ್ರದೇಶಿಕ ಪಕ್ಷ ಜೆಡಿಎಸ್ಗೆ ೩ ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ಪಕ್ಷ ೨೫ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಯಾವುದೇ ಬಿನ್ನಾಭಿಪ್ರಾಯವಿದ್ದರೂ ರಾಷ್ಟçದ ಹಾಗೂ ರಾಜ್ಯದ ಅಭಿವೃದ್ದಿ ದೃಷ್ಠಿಯಿಂದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಿ ೨೮ ಕ್ಷೇತ್ರಗಳಲ್ಲಿಯೂ ಗೆಲ್ಲುವಂತೆ ಶ್ರಮವಹಿಸಬೇಕೆಂದು ಕರೆ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕುತಂತ್ರದ ಕಂಡ ಸೋಲನ್ನು ಕಾರ್ಯಕರ್ತರು ಕರಗಿಸಿಕೊಳ್ಳಲು ಸಾಧ್ಯವಾಗದೇ ಮತ್ತೊಮ್ಮೆ ಸ್ಪರ್ಧೆ ಮಾಡಬೇಕೆಂದು ಇಲ್ಲಿನ ಮುಖಂಡರು ಒತ್ತಾಯಿಸಿದರು. ಕಣದಿಂದ ನಾನೇ ದೂರ ಉಳಿದೆ, ಆದರೇ ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರ ಒತ್ತಾಯದ ಮೇರೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದು, ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ತಂದು ಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಗೆಲುವು ಪಡೆಯಲಿದ್ದಾರೆ, ಮಳವಳ್ಳಿ ಕ್ಷೇತ್ರದ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ, ಕಾಂಗ್ರೆಸ್ ಪಕ್ಷಕ್ಕಿಂತ ಒಂದು ಮತ ಕಡಿಮೆ ಬಂದರೂ ಮುಂದೆ ಮಾತನಾಡುತ್ತೇನೆಂದು ಸವಾಲು ಹಾಕಿದರು.
ಮಾಜಿ ಶಾಸಕ ಡಾ. ಕೆ.ಆನ್ನದಾನಿ ಮಾತನಾಡಿ, ಎಚ್ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿ ಅನುದಾನವನ್ನು ನೀಡಿದ್ದಾರೆ, ಕುಮಾರಸ್ವಾಮಿ ಅವರ ಕೊಡುಗೆ ಏನು ಎನ್ನುವ ಪ್ರಶ್ನೆಗೆ ನಾನೇ ಉತ್ತರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ಪ್ರಭಾರಿ ಸುನೀಲ್ ಸುಬ್ರಹ್ಮಣ್ಯಂ, ಪ್ರಮುಖರಾದ ಕೆ.ನಾರಾಯಣಗೌಡ, ಡಿ.ಸಿ.ತಮ್ಮಣ್ಣ, ಸುರೇಶ್ ಗೌಡ, ಮುನಿರಾಜು, ಸಿ.ಪಿ.ಉಮೇಶ್, ಅಶೋಕ್ ಜಯರಾಮು, ನೆಲ್ಲಿಗೆರೆ ಬಾಲು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಮುಖಂಡರಾದ ಎಚ್.ಆರ್.ಅಶೋಕ್ ಕುಮಾರ್, ಯಮದೂರು ಸಿದ್ದರಾಜು, ವಿ.ಎಂ.ವಿಶ್ವನಾಥ್, ಶಕುಂತಲಾ ಮಲ್ಲಿಕ್ ಇದ್ದರು.




