ಮಂಡ್ಯ ತಾಲ್ಲೂಕಿನ ಮುತ್ತೇಗೆರೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಉಳಿದಿರುವ ಬಿಲ್ ಕಲೆಕ್ಟರ್ ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕೆಂದು ಆಗ್ರಹಿಸಿ ಗ್ರಾ.ಪಂ.ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮುತ್ತೇಗೆರೆ ಗ್ರಾ.ಪಂ.ಯಲ್ಲಿ ಕಳೆದ ಎರಡು ವರ್ಷದಿಂದ ಬಿಲ್ ಕಲೆಕ್ಟರ್ ಹಾಗೂ ಒಂದು ವರ್ಷದಿಂದ ಪಂಚಾಯಿತಿ ಕಾರ್ಯದರ್ಶಿ ಇಲ್ಲ.ಈಗ ಇರುವ ಪಿಡಿಓಗೆ ಪಂಚಾಯಿತಿಯ ಬಗ್ಗೆ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯಿತಿಯ ವೈಫಲ್ಯ ಮತ್ತು ಅಲ್ಲಿನ ದುರಾಡಳಿತ ಖಂಡಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗಿದೆ. ನಿಯೋಜಿತ ಸಿಬ್ಬಂದಿಯಿಲ್ಲದೆ ಗ್ರಾ.ಪಂ. ಕೆಲಸಗಳು ನೆನೆಗುದಿಗೆ ಬಿದ್ದಿವೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹುನುಗನಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಅನುದಾನ ನೀಡಿ ಮನೆ ನಿರ್ಮಿಸಿ ಎಂದು ಇರುವ ಮನೆಗಳನ್ನು ಕೆಡವಿಸಿದ್ದಾರೆ. ಆದರೆ ಅಡಿಪಾಯ ಹಾಕಿದ ಮೇಲೆ ಅನುದಾನ ಸ್ಥಗಿತಗೊಳಿಸಿದ್ದಾರೆ. ಬಿಲ್ ಮಾಡದೆ ಇರುವ ಕಾರಣ ಮನೆ ಕಟ್ಟಲು ಆಗದೆ ಪರ ದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುತ್ತೇಗೆರೆ ಪಂಚಾಯಿತಿ ವ್ಯಾಪ್ತಿಯ ಹುನುಗನಹಳ್ಳಿಯ ಶಾಲಾ ಆವರಣವನ್ನು ಅಕ್ರಮವಾಗಿ ಆವರಿಸಿ ಕೊಂಡಿದ್ದಾರೆ. ಇದನ್ನು ತೆರವುಗೊಳಿಸುವ ಗೋಜಿಗೆ ಯಾರು ಮುಂದಾಗಿಲ್ಲ, 14, 15ನೇ ಹಣಕಾಸಿನ ದುರುಪಯೋಗ ಅಥವಾ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಸುಧಾ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಆನಂದ್, ದಾಸಯ್ಯ ಇತರರು ಭಾಗವಹಿಸಿದ್ದರು.




