ರಾಜ್ಯದಲ್ಲಿ ದಿನೇದಿನೇ ಹಕ್ಕಿಜ್ವರದ ಭೀತಿ ಹೆಚ್ಚಾಗುತ್ತಲೇ ಇದೆ. ಇದೀಗ ಹಕ್ಕಿಜ್ವರ ನಿಯಂತ್ರಣಕ್ಕಾಗಿ ರಾಜ್ಯ ಪಶುಸಂಗೋಪನೆ ಇಲಾಖೆಯು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೋಳಿ ಸೇವನೆ ಮಾಡುವವರು ಅನುಸರಿಸಬೇಕಾದ ಕ್ರಮಗಳೇನು ?
ಕೋಳಿ ಮಾಂಸ ಸೇವನೆ ಮಾಡುವವರು 70 ಡಿಗ್ರಿ ಸೆಂಟಿಗ್ರೇಡ್ ಗಿಂತ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನುಬೇಯಿಸಿ ಸೇವಿಸುವುದು ಒಳ್ಳೆಯದು.
ಕೋಳಿ ಮಾಂಸದ ಅಡುಗೆಗೆ ತಯಾರು ಮಾಡುವವರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಡುಗೆಗಾಗಿ ಕೋಳಿ ಮಾಂಸವನ್ನ ತಯಾರು ಮಾಡಿದ ಬಳಿಕ ನಂಜುನಾಶಕದಿಂದ ಕೈಗಳನ್ನ ಶುಚಿಗೊಳಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹಸಿ ಕೋಳಿಮಾಂಸ, ಅದರ ದ್ರವಗಳು ಅಥವಾ ಬೇಯಿಸಿದ ಮೊಟ್ಟೆಯನ್ನು ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಗಳು ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಬೇಯಿಸದಿರುವ, ಅರೆಬೆಂದ ಮೊಟ್ಟೆಯನ್ನ ತಿನ್ನಬಾರದು. ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಾಣು ಹೆಚ್ಚಿನ ಕಾಲ ಬದುಕುಳಿಯುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು. ಕೋಳಿ ಫಾರಂನಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರು ತಮ್ಮ ಬಟ್ಟೆ, ಶೂ ಹಾಗೂ ಕೈ, ಕಾಲುಗಳಿಗೆ ನಂಜುನಾಶಕ ದ್ರಾವಣ ಸಿಂಪಡಿಸಬೇಕು. ಕೋಳಿ ಸಾಕಾಣಿಕೆಗೆ ಬೇಕಾಗುವ ಸಲಕರಣೆಗಳನ್ನ ಬೇರೆ ಕೋಳಿ ಫಾರಂನಿಂದ ಪಡೆಯಬೇಕಾದರೆ ಸ್ಯಾನಿಟೈಸೆಷನ್ ಮಾಡಬೇಕು ಮತ್ತು ನಂಜುನಾಶಕವನ್ನ ಅಳವಡಿಸಬೇಕು. ಕೋಳಿ ಪಂಜರಗಳನ್ನ ದಿನನಿತ್ಯ ಶುಚಿ ಮಾಡುವುದು. ಆಹಾರ ಮತ್ತು ನೀರನ್ನ ಪ್ರತಿದಿನ ಬದಲಾಯಿಸುವುದು. ಕೋಳಿ ಫಾರಂನಲ್ಲಿ ಬೇರೆ ಹಕ್ಕಿಗಳು ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.




