ಮಳೆ ಅಭಾವದಿಂದ ಬರಗಾಲ ಪರಿಸ್ಥಿತಿ ಎದುರಾಗಿರುವ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಮಂಡ್ಯದಲ್ಲಿ ಮನವಿ ಸಲ್ಲಿಸಿದರು.
ಮಂಡ್ಯ ನಗರದ ತಾಲೂಕು ಕಚೇರಿಗೆ ಭೇಟಿ ನೀಡಿದ ರೈತ ಮೋರ್ಚಾ ಕಾರ್ಯಕರ್ತರು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು, ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಎದುರಾಗಿದೆ. ವಿದ್ಯುತ್ ಅಭಾವದಿಂದ ಇತ್ತೀಚಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಬರಗಾಲದಿಂದ ರೈತರು ಈಗಾಗಲೇ ಶೇ 80% ರಷ್ಟು ಬೆಳೆಗಳನ್ನು ಭಿತ್ತನೆ ಮಾಡಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಎದುರಾಗಿ ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ರೈತರ ನೆರವಿಗೆ ಧಾವಿಸಬೇಕೆಂದ ಮನವಿ ಮಾಡಿದರು.
ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕು,ರೈತರ ಪಂಪಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಅನಿಯಮಿತ ಲೋಡ್ ಶೆಡ್ಡಿಂಗ್ ರದ್ದು ಪಡಿಸಿ, ಏಳು ತಾಸು ವಿದ್ಯುತ್ ಪೂರೈಸಬೇಕು, ರೈತರ ಆತ್ಮಹತ್ಯೆ ತಡೆಯಲು ಧೈರ್ಯ ತುಂಬುವ ಮತ್ತು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮ ಜಾರಿಗೊಳಿಸಬೇಕು, ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಮುಂದುವರಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಮುಖಂಡರಾದ ಸಿ.ಎ.ಜವರೇಗೌಡ, ಎಂ.ಸಿ.ಕಾಂತರಾಜು,.ಸಿದ್ದರಾಜು, ನಂಜುಂಡಸ್ವಾಮಿ ಆಲಕೆರೆ, ನಗರಸಭೆ ಮಾಜಿ ಸದಸ್ಯ ಚಂದ್ರು, ಪೂಜಾ ರಮೇಶ್ ಮತ್ತಿತರರಿದ್ದರು.




