✍️ ಮಾಚಯ್ಯ ಎಂ ಹಿಪ್ಪರಗಿ
ನಿನ್ನೆ ಸ್ನೇಹಿತರೊಬ್ಬರು ಫೋನ್ ಮಾಡಿದ್ದರು. ಮಾತು ರಾಜಕಾರಣದತ್ತ ಹೊರಳಿದಾಗ, “ಇಲ್ಲೀವರೆಗೂ ನನಗೆ ತುಸು ಅನುಮಾನವಿತ್ತು. ಆದರೆ ಬಿಜೆಪಿ ಪಟ್ಟಿ ನೋಡಿದ ಮೇಲೆ, ಈ ಸಲ ಕಾಂಗ್ರೆಸ್ 120ಕ್ಕಿಂತಲೂ ಜಾಸ್ತಿ ಸೀಟು ಗೆಲ್ಲೋದು ಗ್ಯಾರಂಟಿ. ಹೊಸಬರಿಗೆ ಅವಕಾಶ ಮಾಡಿಕೊಡ್ತೀವಿ ಅನ್ನೋ ಗುಜರಾತ್ ಸ್ಟ್ರಾಟಜಿಯನ್ನು ಇಲ್ಲೂ ಬಳಸಲು ಹೋಗಿ, ಬಿಜೆಪಿ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ. ಘಟಾನುಘಟಿ ನಾಯಕರನ್ನೇ ನೆಗ್‌ಲೆಕ್ಟ್ ಮಾಡಿರೋ ಬಿಜೆಪಿಯನ್ನು ಈ ಸಲ ಭಿನ್ನಮತದ ಒಳೇಟುಗಳೇ ಮಣ್ಣು ಮುಕ್ಕಿಸಲಿವೆ” ಎಂದು ತುಂಬು ವಿಶ್ವಾಸದಿಂದ ಮಾತಾಡಿದರು. ಹೆಚ್ಚೂಕಮ್ಮಿ ಇದೇ ಅಭಿಪ್ರಾಯವನ್ನು ತೂಗುವಂತಹ ಮಾತುಗಳನ್ನು ಇನ್ನೂ ಒಂದಿಬ್ಬರು ಗೆಳೆಯರು ನನ್ನ ಬಳಿ ಹೇಳಿಕೊಂಡರು. ಆದರೆ ನನ್ನ ತಲೆಯಲಿ ಮಾತ್ರ, ಯಾವುದೋ ಕೆಟ್ಟ ಶಕುನವೊಂದು ಸುಳಿದಾಡುತ್ತಿದೆ. ಬಿಜೆಪಿಯ ಲೆಕ್ಕಾಚಾರವೇ ಬೇರೆ ಇರುವಂತೆ ಕಾಣಬರುತ್ತಿದೆ. ಅವರು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಈ ಪಟ್ಟಿಯೇ ಅವರಿಗೆ ನೆರವು ನೀಡಲಿದೆಯೇನೊ ಅನಿಸುತ್ತಿದೆ. ಹಾಗನ್ನಿಸಲು ನನ್ನ ಬಳಿ ಕಾರಣವುಂಟು.
ಬಿಜೆಪಿ ಈ ಪಟ್ಟಿಯನ್ನಿಟ್ಟುಕೊಂಡು ಏನು ಮಾಡಬಹುದೋ, ಅದಕ್ಕಿಂತ ಮುಂಚಿತವಾಗಿ ಈ ರಾಜ್ಯದಲ್ಲಿ ಯಾವ ಸನ್ನಿವೇಶ ಇದೆ ಅನ್ನೋದನ್ನು ಗಮನಿಸೋಣ. ಅಬ್ಬಬ್ಬಾ, ಭಯಂಕರ ಆಡಳಿತವಿರೋಧಿ ಅಲೆ. ಕಳೆದ ಸಲ ಬಿಜೆಪಿಗೆ ಮತ ಹಾಕಿದವರೇ ಬೊಮ್ಮಾಯಿ ಸರ್ಕಾರವನ್ನು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಅವರ ರೆಗ್ಯುಲರ್ ಕೋಮು ಅಜೆಂಡಾಗಳೂ ಕೈಕೊಡುತ್ತಿಲ್ಲ. ಟಿಪ್ಪೂವಿನ ವಿರುದ್ಧ ಎಬ್ಬಿಸಿ ನಿಲ್ಲಿಸಲು ನೋಡಿದ ಉರಿಗೌಡ-ನಂಜೇಗೌಡ ಕಾಲ್ಪನಿಕ ಪಾತ್ರಗಳೂ ಮಕಾಡೆ ಮಲಗಿವೆ. ಮತ್ತೆಮತ್ತೆ ಬಂದುಹೋಗುತ್ತಿರುವ ಸ್ವತಃ ಮೋದಿಯ ವರ್ಚಸ್ಸೂ ಬಿಜೆಪಿಯ ಮೈಲೇಜು ಹೆಚ್ಚಿಸುತ್ತಿಲ್ಲ. ಜಾತಿ ಸಮೀಕರಣದಲ್ಲೂ ಬಿಜೆಪಿಗೆ ಈ ಸಲ ಲಿಂಗಾಯತರ ಒಲವು ಮೊದಲಿನಂತೆ ಸಾರಾಸಗಟಾಗಿ ದೊರಕುವುದು ಡೌಟು. ಮುಸ್ಲಿಂ ಮೀಸಲಾತಿಯನ್ನು ಕಿತ್ತುಕೊಂಡು, ಅದರ ಮೂಲಕ ದಂಗೆಯೆಬ್ಬಿಸಿ, ಆ ಬೆಂಕಿಯಲ್ಲಿ ಮೈಬೆಚ್ಚಗಾಗಿಸಿಕೊಳ್ಳುವ ಬಿಜೆಪಿ ಹುನ್ನಾರವೂ ಠುಸ್ಸಾಗಿದೆ. ಕಾನೂನುಬದ್ಧವಲ್ಲದ ರೀತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಹೋಗಿ ದಲಿತ ಸಮುದಾಯಗಳ ವಿರೋಧಕ್ಕೂ ತುತ್ತಾಗಿದೆ. ಇನ್ನು ಫಾರ್ಟಿ ಪರ್ಸೆಂಟ್ ಅಪಖ್ಯಾತಿಯ ಬಗ್ಗೆ ಕೇಳುವುದೇ ಬೇಡ. ಇಂತಿಪ್ಪ ಏರುದಾರಿಯಲ್ಲಿ ಸಾಗಿ ಮತ್ತೆ ಅಧಿಕಾರ ಹಿಡಿಯುವುದು, ಏದುಸಿರು ಬಿಡುತ್ತಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಸಾಧ್ಯವಿಲ್ಲದ ಮಾತು.
ಹಾಗಾದರೆ, ಘಟಾನುಘಟಿ ಹಳಬರನ್ನು ಮೂಲೆಗುಂಪು ಮಾಡಿ, ಹೊಸಬರಿಗೆ ಅವಕಾಶ ಕೊಟ್ಟಿರುವ ಈ ಟಿಕೇಟು ಹಂಚಿಕೆಯ ಪ್ರಯೋಗ ಬಿಜೆಪಿಯನ್ನು ಬಚಾವು ಮಾಡುವುದು ಹೇಗೆ? ’ಹೊಸಬರಿಗೆ ಅವಕಾಶ’ ಎಂಬ ಈ ಪಟ್ಟಿ ಮತದಾರರನ್ನು ಸೆಳೆದು ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಲ್ಲ, ಬಿಜೆಪಿ ನಡೆಸುವ ಚುನಾವಣಾ ಅಕ್ರಮಗಳಿಗೆ ಪರ್ಮಿಟ್ಟಿನಂತೆ ಕೆಲಸ ಮಾಡಬಹುದೇನೋ ಎಂಬ ಆತಂಕ ಕಾಡುತ್ತಿದೆ. ರಾಜಾರೋಷವಾಗಿ ಬೇರೊಂದು ಪಕ್ಷದ ಶಾಸಕರನ್ನೇ ಖರೀದಿ ಮಾಡಿ, ಸರ್ಕಾರಗಳನ್ನು ಕೆಡವಿ ತನ್ನ ಸರ್ಕಾರ ರಚನೆ ಮಾಡುವಷ್ಟು ಹದ್ದುಮೀರಿ ಹೋಗಿರುವ ಬಿಜೆಪಿಗೆ ಚುನಾವಣಾ ಅಕ್ರಮವೇನೂ ದೊಡ್ಡ ಸಂಗತಿಯಲ್ಲ. ಉತ್ತರ ಪ್ರದೇಶ ಚುನಾವಣೆಯಲ್ಲಿ ಲಾರಿಗಟ್ಟಲೆ ಬೇನಾಮಿ ಇವಿಎಂ ಮತಯಂತ್ರಗಳು ಪತ್ತೆಯಾದದ್ದು ಇದಕ್ಕೆ ಸಾಕ್ಷಿ. ಕರ್ನಾಟಕದಲ್ಲೂ ಅಂತಹ ಅಕ್ರಮಗಳನ್ನು ನಡೆಸಲಿರುವುದರ ಬಗ್ಗೆ ಈಗಾಗಲೇ ಸುಳಿವುಗಳು ಗೋಚರಿಸುತ್ತಿವೆ. ಇತ್ತಿತ್ತಲಾಗೆ, ಹುಡುಕಿ-ಹುಡುಕಿ ರೌಡಿ ಶೀಟರ್‌ಗಳನ್ನೇ ಪಕ್ಷಕ್ಕೆ ಹಾರ ಹಾಕಿ ಸ್ವಾಗತಿಸುತ್ತಿರುವ ಕ್ರಮಗಳನ್ನು ನೋಡಿದಾಗ, ಫೈಟರ್ ರವಿಯಂತಹ ವ್ಯಕ್ತಿ ಸಲೀಸು ಪ್ರಧಾನಿ ಮೋದಿಯನ್ನು ಭೇಟಿಯಾಗಿ ತನ್ಮಯತೆಯಿಂದ ಕೈಮುಗಿವುದನ್ನು ಕಂಡಾಗ, ಸ್ಪೀಕರ್ ಕಾಗೇರಿಯವರು ಮುಸ್ಲಿಂ(!!!) ರೌಡಿಯೊಬ್ಬನನ್ನು ತನ್ನ ಕಚೇರಿಯಲ್ಲಿ, ಪಕ್ಕದಲ್ಲೇ ಕೂರಿಸಿಕೊಂಡು ರೌಡಿಶೀಟರುಗಳ ಸಭೆ ನಡೆಸುವುದನ್ನು ನೋಡಿದಾಗ ಇಂತಹ ಅನುಮಾನ ಮೂಡುವುದು ಸಹಜ. ಇನ್ನು ಚುನಾವಣಾ ಆಯೋಗ, ಪೊಲೀಸರು, ಪೋಲಿಂಗ್ ಆಫೀಸರ್‌ಗಳಂತಹ ತಿಂಗಳ ಸಂಬಳದ ನೌಕರರ ಬಗ್ಗೆ ವಿಶ್ವಾಸವಿಡುವುದು ದೂರದ ಮಾತು. ಒಟ್ಟಿನಲ್ಲಿ ಭರಪೂರ ಚುನಾವಣಾ ಅಕ್ರಮಕ್ಕೆ ಕರ್ನಾಟಕದ ಈ ಚುನಾವಣೆ ಸಾಕ್ಷಿಯಾಗುವುದರಲ್ಲಿ ವೈಯಕ್ತಿಕವಾಗಿ ನನಗಂತೂ ಅನುಮಾನವಿಲ್ಲ.
ಆದರೆ ಬಿಜೆಪಿಗೆ ಅಲ್ಲೊಂದು ತೊಡಕುಂಟು. ಬಿಜೆಪಿಯ ವಿರುದ್ಧ ಎಂಥಾ ಕೆಟ್ಟ ಜನಾಭಿಪ್ರಾಯ, ಆಡಳಿತ ವಿರೋಧಿ ಅಲೆ ಜಮಾವಣೆಯಾಗಿದೆಯೆಂದರೆ, ಈ ಸಲ ಅವರು ಮತ್ತೇನಾದರು ಅಧಿಕ್ಕಾರಕ್ಕೇರಿದರೆ ಅಥವಾ ಸಿಂಪಲ್ ಮೆಜಾರಿಟಿಗೆ ಸನಿಹಕ್ಕೆ ಬಂದು ನಿಲ್ಲುವ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿದರೆ, ರಾಜಕೀಯ ವಿಶ್ಲೇಷಕರಿರಲಿ, ಜುಮ್ಮಕ್ಕನ ಹೊಟೇಲಿನಲ್ಲಿ ಕೂತು ಚಹಾ ಹೀರುವ ಕಟ್ಟೆಪುರಾಣದ ವಾಟಿಸ್ಸೆ-ಉಗ್ರಿ-ಕಾಳಮಾವನಂತಹ ಟಿಪಿಕಲ್ ರೂರಲ್ ಪಾತ್ರಗಳೇ ಬಿಜೆಪಿಯ ಗೆಲುವನ್ನು ಗುಮಾನಿಯಿಂದ ನೋಡುತ್ತವೆ; ಏನೋ ಕರಾಮತ್ತು ಮಾಡಿ ಎಲೆಕ್ಷನ್ ಗೆದ್ದಿವೆ ಅಂತ ಸಾರಾಸಗಟಾಗಿ ಮಾತಾಡುತ್ತವೆ. ಇಂಥಾ ಅಭಿಪ್ರಾಯ, ಮುಂಬರುವ 2024ರ ಪಾರ್ಲಿಮೆಂಟ್ ಎಲೆಕ್ಷನ್‌ಗೆ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟು ಮಾಡಬಹುದು.
ಇಂಥಾ ಅಭಿಪ್ರಾಯಗಳನ್ನು ಬಫರ್ ಮಾಡುವುದಕ್ಕಾಗಿಯೇ ‘ಹೊಸಮುಖಗಳ ಪಟ್ಟಿ’ಯನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇಷ್ಟೆಲ್ಲ ಆಡಳಿತವಿರೋಧಿ ಅಲೆ ಇದ್ದಾಗಿಯೂ ಬಿಜೆಪಿ ಮತ್ತೆ ಹೇಗೆ ಇಷ್ಟು ಸೀಟು ಗೆದ್ದಿತು? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆಗ, ಘಟಾನುಘಟಿ ಎನಿಸಿದ ಹಾಲಿ ಶಾಸಕರಿಗೆ ಟಿಕೇಟು ತಪ್ಪಿಸಿ, ಹೊಸಮುಖಗಳಿಗೆ ಬಿಜೆಪಿ ಟಿಕೇಟು ನೀಡಿದ್ದರಿಂದ ಬಿಜೆಪಿಯು ಆಡಳಿತವಿರೋಧಿ ಅಲೆಯನ್ನು ಬೈಪಾಸ್ ಮಾಡಿ ಜನರ ವಿಶ್ವಾಸವನ್ನು ಮತ್ತೆ ಗಳಿಸಿದೆ ಅನ್ನೋ ವಾದಗಳನ್ನು ಬಿಜೆಪಿ ಕೃಪಾಪೋಷಿತ ನ್ಯೂಸ್ ಚಾನೆಲ್‌ಗಳು, ವಿಶ್ಲೇಷಕರು ಹಗಲುರಾತ್ರಿ ಗಂಟಲು ಹರಿದುಕೊಂಡು ಪ್ರಚಾರ ಮಾಡುತ್ತಾರೆ. ಜನ ಕೂಡಾ ಹೌದೆಂದು ನಂಬುತ್ತಾರೆ. ಚುನಾವಣಾ ಅಕ್ರಮಗಳು ಚರ್ಚೆಯಿಂದ ಹಿಂದೆ ಸರಿದು, ಬಿಜೆಪಿ ಸೇಫಾಗುತ್ತದೆ!
ಫಲಿತಾಂಶದ ನಂತರ ಬಿಜೆಪಿಯ ಗೆಲುವನ್ನು ಪೋಸ್ಟ್‌ಮಾರ್ಟಂ ಮಾಡುತ್ತಾ, ನಮ್ಮ ಇಂಟಲೆಕ್ಚುವಲ್ ವಲಯದಿಂದ ’ಹಿಂದೂ ಮೈಂಡ್ಸ್ ಆರ್ ರಿಗ್ಗಡ್ ಅಂತಲೋ, ’ಹೌ ಬಿಜೆಪಿ ಬೈಪಾಸ್ಡ್ ಆಂಟಿ-ಇನ್‌ಕಂಬೆನ್ಸಿ?’ ಅಂತಲೋ ವಿಶ್ಲೇಷಣೆಯನ್ನು ಕಟ್ಟುತ್ತೇವೆ, ಹುಡುಕಾಟ ನಡೆಸುತ್ತೇವೆ. ಆದರೆ ಚುನಾವಣಾ ಅಕ್ರಮಗಳ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸದ ಹೊರತು, ಸಿವಿಲ್ ಸೊಸೈಟಿಯಿಂದ ಒಂದು ವಿಜಿಲೆನ್ಸ್ ಪರಿಹಾರ ಸಾಹಸಕ್ಕೆ ಕೈಹಾಕದ ಹೊರತು, ಚುನಾವಣಾಪೂರ್ವದಲ್ಲಿ ನಾವು ಬಹಳ ಕಷ್ಟಪಟ್ಟು ಕಟ್ಟುವ ಜನಾಭಿಪ್ರಾಯಗಳು ಫಲಕಾರಿಯಾಗದೆ ಹೋಗಬಹುದು.
ನನ್ನ ಈ ಆತಂಕಕ್ಕೆ ಹೆಚ್ಚೇನೂ ಅರ್ಥವಿಲ್ಲದಿರಬಹುದು, ಇಲ್ಲದಂತಾಗಲಿ ಎಂದೇ ಆಶಿಸುತ್ತೇನೆ. ಆದರೆ ಆತಂಕವೇ ದೇಶವನ್ನು ಆಳುತ್ತಿರುವಾಗ ಯಾವುದನ್ನೂ ಕಡೆಗಣಿಸಲಾಗದು…