ಅಮೆರಿಕದಲ್ಲಿ ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಜನ್ಮದತ್ತ ಪೌರತ್ವದ ವಿಷಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ಒದಗಿಸುತ್ತಿದ್ದ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದರು. ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಟ್ರಂಪ್ ಆದೇಶವನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ತಡೆಹಿಡಿದಿದೆ ಎಂದು ವರದಿಯಾಗಿದೆ.
ನ್ಯಾಯಾಧೀಶರು ಈ ಆದೇಶವನ್ನು ಅಸಂವಿಧಾನಿಕ ಎಂದು ಕರೆದಿದ್ದಾರೆ. ಡೆಮಾಕ್ರಟಿಕ್ ನೇತೃತ್ವದ ನಾಲ್ಕು ರಾಜ್ಯಗಳ ಮನವಿಯನ್ನು ಗೌರವಿಸಿ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕೋಘೆನೂರ್ ಅವರು ಆದೇಶವನ್ನು ಜಾರಿಗೊಳಿಸದಂತೆ ಆಡಳಿತವನ್ನು ತಡೆಯುವ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಜ.20ರಂದು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದರು. ಈ ಆದೇಶದ ಪ್ರಕಾರ ಜನನ ಹಕ್ಕು ಪೌರತ್ವವನ್ನು ಕೊನೆಗೊಳಿಸಲು ಫೆ.20 ಕೊನೆಯ ದಿನಾಂಕವಾಗಿದೆ.
ಈ ಮೊದಲು ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ದೊರಕುತ್ತಿತ್ತು. ಇದನ್ನು ಬಳಸಿಕೊಂಡು ಅನೇಕರು ತಾತ್ಕಾಲಿಕ ವೀಸಾ ಪಡೆದು ಅಥವಾ ಅಮೆರಿಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆದರೆ ಇನ್ನು ಮುಂದೆ ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು. ಇಬ್ಬರೂ ಪೋಷಕರು ಅಮೆರಿಕ ನಾಗರಿಕ ಆಗದೇ ಇದ್ದರೆ, ಜನ್ಮಸಿದ್ಧ ಪೌರತ್ವ ಸಿಗದು ಎಂಬ ನಿಯಮವನ್ನು ಟ್ರಂಪ್ ತಂದಿದ್ದಾರೆ.




