ಮಂಡ್ಯ ಜಿಲ್ಲಾ ಖಾಸಗಿ ಬಸ್ ಚಾಲಕರ ಸಂಘದ ವತಿಯಿಂದ ಮೊದಲನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ರೆಡ್ ಕ್ರಾಸ್ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪುಕಲ್ಪನೆಗಳಿದ್ದು ಹೋಗಲಾಡಿಸಬೇಕು. ಹೆಚ್ಚು ಜನರು ಸೇರುವ ಧಾರ್ಮಿಕ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು. ಧಾರ್ಮಿಕ ಕೇಂದ್ರಗಳು ಪೂಜೆ ಪ್ರಾರ್ಥನೆಗಳಿಗೆ ಸೀಮಿತವಾಗಿರದೆ ಸಮಾಜಮುಖಿಯಾಗಿ ಸ್ಪಂದಿಸಬೇಕು ಎಂದರು.
ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ರಕ್ತದಾನವು ಸರ್ವಶ್ರೇಷ್ಠ ದಾನವಾಗಿದ್ದು, ರಕ್ತದಾನಕ್ಕೆ ಬೇರೇ ಯಾವುದೇ ಬಗೆಯ ಪರ್ಯಾಯ ಮಾರ್ಗವು ಇಲ್ಲವಾಗಿದ್ದು, ರಕ್ತದಾನವನ್ನು ಮಾಡುವುದರ ಮೂಲಕ ಒಂದು ಜೀವವನ್ನು ಉಳಿಸುವುದಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ಮಂಡ್ಯ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಭಕ್ತ ವತ್ಸಲಾ ಮಾತನಾಡಿ , ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮನುಷ್ಯ ದಾನ ಮಾಡಿದರಷ್ಟೆ ರಕ್ತದ ಉತ್ಪಾದನೆ ಸಾಧ್ಯ ಎಂದರು.
ಮಂಡ್ಯ ಜಿಲ್ಲಾ ಖಾಸಗಿ ಬಸ್ ಚಾಲಕರ ಸಂಘದ ಅಧ್ಯಕ್ಷೆ ಯಶವಂತ್ ಮಾತನಾಡಿ , ಮೊದಲನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಮುಂಬರುವ ವರ್ಷಗಳಲ್ಲಿ ಇನ್ನು ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾಸಗಿ ಬಸ್ ಚಾಲಕರ ಸಂಘದ ಉಪಾಧ್ಯಕ್ಷ ಸಂಜಯ್ ಗೌಡ, ಕಾರ್ಯದರ್ಶಿ ಅಶೋಕ್, ರಫಿಕ್, ನಾಗಣ್ಣ, ನಂದ, ವಿಜಯ್ ಕುಮಾರ್ ಸೇರಿದಂತೆ ಮತ್ತಿತರರಿದ್ದರು. ಚಾಲಕರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಂಡರು.




