Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೆದ್ದಾರಿ ಪರಿವೀಕ್ಷಣೆ ತಂಡಕ್ಕೆ ಬೂದನೂರು ಗ್ರಾಮಸ್ಥರ ತರಾಟೆ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಧ್ವಾನ ಕುರಿತು ಕ್ರಮ ವಹಿಸುವಂತೆ ಹಳೇ ಬೂದನೂರು ಗ್ರಾಮಸ್ಥರು ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದ ತಂಡವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ಗುರುವಾರ ಬೆಳಿಗ್ಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ, ಎಎಸ್ಪಿ ಸಿ‌.ಇ. ತಿಮ್ಮಯ್ಯ , ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದರ ನೇತೃತ್ವದ ತಂಡ ಹೆದ್ದಾರಿ, ಸರ್ವೀಸ್ ರಸ್ತೆ ಸಮಸ್ಯೆ ಕುರಿತು ಪರಿಶೀಲನೆಗೆ ಆಗಮಿಸಿದ ವೇಳೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ದೈವಿಕ್ ಎಂಬುವವರ ಹಾಜರಿಗೆ ಸ್ವಂತ ಮನೆ ನಮ್ಮಹಕ್ಕು ಹೋರಾಟಗಾರ ಬೂದನೂರು ಸತೀಶ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ಹೆದ್ದಾರಿ ಯೋಜನಾ ನಿರ್ದೇಶಕ, ಭೂಸ್ವಾಧೀನಾಧಿಕಾರಿ ಹಾಜರಾಗುವಂತೆ ಸೂಚಿಸುವಂತೆ ಒತ್ತಾಯಿಸಿದರು.

ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ 2 ಭಾಗದಲ್ಲಿ ಸ್ಥಳೀಯರಿಗೆ ಹಾಗೂ ಟೋಲ್ ಪಾವತಿಸದ ಸಾರ್ವಜನಿಕರು ಓಡಾಡಲು ಸರ್ವೀಸ್ ರಸ್ತೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಡಿಬಿಎಲ್ ಎಂಬ ಗುತ್ತಿಗೆದಾರ ಕಂಪನಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದೆ. ಪರಿಣಾಮ ಸರ್ವೀಸ್ ರಸ್ತೆ ಪ್ರಯಾಣ ಜೀವಭಯ ಹುಟ್ಟಿಸುತ್ತಿದೆ‌. ನೂರಾರು ಸಮಸ್ಯೆ ಹೊತ್ತಿರುವ ಈ ಭಾಗದ ಸಮಸ್ಯೆಗಳಲ್ಲಿ ನಾವು ಬದುಕುತ್ತಿದ್ದೇವೆ ಎಂದು ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಶಾಸಕರು ಕೇವಲ ಪತ್ರ ವ್ಯವಹಾರ ಮಾಡದೇ ಕಾಲ ಮಿತಿಯಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲು ವಿನಂತಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನ ಮಾಡಿಕೊಂಡಿರುವ ಭೂಮಿ ತೆರವುಗೊಳಿಸಬೇಕು. ಪಾದಾಚಾರಿ ರಸ್ತೆ, ಕುಡಿಯುವ ನೀರಿನ ಮಾರ್ಗ ಹಾಗೂ ಇನ್ನಿತರ ಸೌಲಭ್ಯಕ್ಕೆ ತೆರವುಗೊಂಡಿರುವ ಸ್ಥಳ ಕಾಯ್ದಿರಿಸಬೇಕು. ಈಗಾಗಲೇ ಅನುಮೋದನೆಗೊಂಡಿರುವ ಪಾದಾಚಾರಿ ಮೇಲ್ಸೆತುವೆ ಕಾಮಗಾರಿ ತ್ವರಿತವಾಗಿ ಮುಗಿಯಬೇಕು. ರಸ್ತೆಯಲ್ಲಿ ಸಂಚಾರಿ ನಿಯಮ ಅನುಸಾರ ರಸ್ತೆ ವಿನ್ಯಾಸಗೊಳಿಸಬೇಕು. ಬಸ್ ಬೇ, ಬಸ್ ನಿಲ್ದಾಣ, ಶೌಚಾಲಯ ಮುಂತಾಗಿ ಕಾಮಗಾರಿಯಾಗಬೇಕು ಎಂದರು.

ಸರ್ವೀಸ್ ರಸ್ತೆಯಲ್ಲಿ ಬೀದಿದೀಪ, ಸಿಸಿ ಕ್ಯಾಮರಾ ಅಳವಡಿಕೆಯಾಗಬೇಕು. ಅದಕ್ಕೆ ಪೂರಕವಾಗಿ ಬ್ಯಾಟರಿ ಚಾಲಿತ ವ್ಯವಸ್ಥೆಯಾಗಬೇಕು. ರಸ್ತೆ ಬದಿ ಚರಂಡಿಯ ಕೊಳಚೆ ನೀರು ಕೆರೆ, ಕಾಲುವೆ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು. ಸರ್ವೀಸ್ ರಸ್ತೆ ಬದಿ ಚರಂಡಿ ಮೇಲೆ ಹಾಕಿರುವ ಸ್ಲಬ್’ಗಳು ಪೂರ್ಣವಾಗಿಲ್ಲ. ನಡೆದಾಡಲು ಅನುವಾಗುವಂತೆ ಸ್ಲಬ್ ಅಳವಡಿಸಬೇಕು ಎಂದು ಆಗ್ರಹಿಸಿದರು‌‌‌.

6 ಪಥದ ಹೆದ್ದಾರಿ ಮೂಲಕ ಕೆಲ ವಾಹನ, ಪಾದಾಚಾರಿಗಳು ತೆರಳಲು ಹೆದ್ದಾರಿಗೆ ಅಳವಡಿಸಿರುವ ತಂತಿಬೇಲಿ ಕಿತ್ತು ಹಾಕಿದ ಓಡಾಡುವುದನ್ನು ತಡೆಯಲು ಕ್ರಮ ವಹಿಸಬೇಕು ಮುಂತಾಗಿ ದೂರಿನ ಮನವಿ ಸಲ್ಲಿಸಿದರು‌.
ಈ ವೇಳೆ ಮುಖಂಡರಾದ ನಾಗರಾಜು, ಸಿದ್ದಪ್ಪ, ಕೀರ್ತಿಕುಮಾರ್, ಜಗದೀಶ್, ಸಿದ್ದರಾಜು, ಗ್ರಾಪಂ ಮಾಜಿ ಸದಸ್ಯ ಶಂಕರಪ್ಪ ಮೊದಲಾದವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ