ಮಂಡ್ಯ ಜಿಲ್ಲೆಯ ಪ್ರಸಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಅಂದಾಜು ರೂ. 30 ಲಕ್ಷ ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಚಿಟ್ಟೆಗಳ ಪ್ರಭೇದಗಳು
ರಂಗನತಿಟ್ಟು ಪಕ್ಷಿಧಾಮದಲ್ಲಿ Lime Butterfly, Crimson Rose, Southern Bird wing, Common Rose, Blue Tiger, Mottle Emigrant, Yellow Pansy, Red Pier rot, Pioneer ಮತ್ತು Tailed jay ಸೇರಿದಂತೆ ವಿವಿಧ ಜಾತಿಯ ಆಕರ್ಷಕ, ಅಪರೂಪದ ಚಿಟ್ಟೆಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ, ಚಿಟ್ಟೆಗಳ ಆಹಾರಕ್ಕಾಗಿ ನಿಂಬೆ ಕಿತ್ತಳೆ, ಈಶ್ವರ ಬಳ್ಳಿ, ಕಾಡು ಹಾಲೆ ಬಳ್ಳಿ, ಕ್ಕೆ ಸೀಮೆ ತಂಗಡಿ, ಕಾಡು ಬಸಳೆ, ಕಲ್ಲುರಕಿ, ಕಾಡು ಕತ್ತರಿ, ಅಶೋಕ ಮರ, ಸಂಪಿಗೆ ವಿವಿಧ ಸಸ್ಯಗಳು/ಗಿಡಗಳನ್ನು ಬೆಳಸಲಾಗಿದೆ. ಗಿಡಗಳು ಸಿಗದ ಸಮಯದಲ್ಲಿ ಕೃತಕವಾಗಿ ಹಣ್ಣು ಹಂಪಲುಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಿಸಿರುವ ‘ಚಿಟ್ಟೆ ಪಾರ್ಕ್’ಗೆ ಫೆಬ್ರವರಿ ಮಾಹೆಯಲ್ಲಿ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ ಮೈಸೂರು ಹಾಗೂ ಸಿಬ್ಬಂದಿಗಳ ಜೊತೆ ಕ್ಷೇತ್ರ ತಪಾಸಣೆ ಮಾಡಿ ಅಲ್ಲಿನ ಚಿಟ್ಟೆ ಪಾರ್ಕಿನ ಮಾದರಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಪಡೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಚಿಟ್ಟೆ ಪಾರ್ಕ್’ನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿಗಾಗಿ (Breeding Centre) 1,500 ಚದರ ಅಡಿ ಹಾಗೂ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಪ್ರದೇಶ (Exhibition Area) ಸುಮಾರು 5,000 ಚದರ ಅಡಿ ಪ್ರದೇಶವನ್ನು ಮೀಸಲಿಡಲು ಉದ್ದೇಶಿಸಲಾಗಿದೆ. 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಳಡಿಸಿಕೊಂಡು ರೂ. 30 ಲಕ್ಷದ ಅಂದಾಜು ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.




