ರಾಜ್ಯವನ್ನು ಭ್ರಷ್ಟಾಚಾರದ`ಗಂಗೋತ್ರಿ’ಯನ್ನಾಗಿಸಿದ ಮತ್ತು ಜನರನ್ನು ಜಾತಿ ಹಾಗೂ ಕೋಮುವಾದದ ಹೆಸರಲ್ಲಿ ವಿಭಜನೆಗೊಳಿಸುತ್ತಿರುವ ಬಿಜೆಪಿ ಪಕ್ಷವನ್ನು ಮತ್ತೇ ಅಧಿಕಾರಕ್ಕೆ ಬರದಂತೆ ತಡೆಯುವುದು ಇಂದಿನ ತುರ್ತು ಅಗತ್ಯವೆಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ವರ್ಗದ ತ್ಯಾಗ ಬಲಿದಾನದ ಹೋರಾಟಗಳ ಮೂಲಕ ಪಡೆದ 8 ಗಂಟೆ ಕೆಲಸದ ಹಕ್ಕು ಸೇರಿದಂತೆ ಕಾನೂನು ಬದ್ದ ಹಕ್ಕುಗಳನ್ನುನಿರಾಕರಿಸುತ್ತಾ ನಾಡಿನ ಅಭಿವೃದ್ಧಿಗೆ ಮಹತ್ತರ ಕಾಣಿಕೆ ನೀಡದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿರುವ ಬಿಜೆಪಿ ಜನವಿರೋಧಿ ಪಕ್ಷವಾಗಿದೆ ಎಂದು ದೂರಿದರು.
ಮುಂದಿನ ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರವನ್ನು ಚುನಾಯಿಸಲು ಹೊರಟಿರುವ ಜಿಲ್ಲೆಯ ಲಕ್ಷಾಂತರ ದುಡಿಯುವ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಸಲುವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಸಮಿತಿಯು ಈ ಕಾರ್ಮಿಕ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಪ್ರಕಟಿಸಿದೆ, ಇದನ್ನು ಜಿಲ್ಲಾ ಸಮಿತಿಯ ಬಿಡುಗಡೆಗೊಳಿಸುತ್ತಿದೆ ಎಂದರು.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ದುಡಿಯುವ ಜನತೆ ಯಾವ ನೀತಿಗಳ ವಿರುದ್ಧ ನಿರಂತರ ಹೋರಾಟಗಳಲ್ಲಿ ತೊಡಗಿದ್ದಾರೋ ಅದೇ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಮಾಡುತ್ತಿರುವ ಕಾರ್ಪೋರೇಟ್ ಬಂಡವಾಳಶಾಹಿ ಪರ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದು ರಾಜಕೀಯದಲ್ಲಿ ಬಲಿಷ್ಠವಾಗುವುದನ್ನು ಈ ಕಾಲಾವಧಿಯಲ್ಲಿ ಕಂಡಿದ್ದೇವೆ; ಜನರಲ್ಲಿ ಬೆಳೆಯುತ್ತಿರುವ ತೀವ್ರ ಅಸಮಾಧಾನವನ್ನು ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು ಮತೀಯ ಬಣ್ಣ ನೀಡುತ್ತಾ ತಮ್ಮ ಜನವಿರೋಧಿ ಆರ್ಥಿಕ – ಸಾಮಾಜಿಕ ನೀತಿಗಳನ್ನು ಮರೆಮಾಡಲು ವಿಫಲ ಯತ್ನಗಳನ್ನು ನಡೆಸಿದೆ ಎಂದು ದೂರಿದರು.
ಮಂಡ್ಯ ಜಿಲ್ಲೆಯು ಕಾರ್ಮಿಕ ವರ್ಗದ ಪರ ಆರಂಭದಿಂದ ದುಡಿಯುವ ಜನರ ಪರವಾಗಿ ಧ್ವನಿ ಎತ್ತುವ ಸಿಪಿಐ(ಎಂ) ಪಕ್ಷ ಇತರ ಎಡ ಹಾಗೂ ಜಾತ್ಯತೀತ ಶಕ್ತಿಗಳು ಗೆಲ್ಲುವಂತೆ ಶ್ರಮಿಸುವುದು, ಕೋಟ್ಯಾಂತರ ದುಡಿಯುವ ವರ್ಗದ ಹಿತಾಸಕ್ತಿಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬ ದುಡಿಯುವ ವರ್ಗದ ಕಾರ್ಮಿಕರ ತಾವು ಇದನ್ನು ಅರ್ಥ ಮಾಡಿಕೊಂಡು, ತಮ್ಮ ಸುತ್ತಮುತ್ತಲಿನ ಜನತೆ ಅರ್ಥ ಮಾಡಿಸಿ, ಬಿಜೆಪಿ ವಿರುದ್ಧ ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಸಿಐಟಿಯೂ ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಮುಖಂಡರಾದ ಮಂಜುಳ ರಾಜ್, ಎ.ಬಿ.ಶಶಿಕಲಾ ಉಪಸ್ಥಿತರಿದ್ದರು.




