ಕಾವೇರಿ ಕೊಳ್ಳ ಪ್ರದೇಶದ ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದು ಹೋಗಿ ಫೋಲಾಗದಂತೆ ತಡೆಯಲು ತಮಿಳುನಾಡು ಕಟ್ಟಿವೈ, ಗುಂಡಾಲ್ ಹಾಗೂ ವೈಗೈ ನದಿಗೆ ನೀರು ಹರಿಸುವ ಯೋಜನೆಯನ್ನು ಆರಂಭಿಸಿದೆ, ಇದೇ ಕಾರಣಕ್ಕಾಗಿ ಕರ್ನಾಟಕದ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ನಿನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ತಿಳಿಸಿದರು.
ಮಂಡ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಚ್ಚುವರಿ ನೀರು ಬಳಕೆಗೆ ಅವಕಾಶ ಸಿಕ್ಕಿದ್ದರೆ ಮೇಕೆದಾಟು ಯೋಜನೆ ಸಾಕಾರಗೊಳ್ಳುತ್ತಿತ್ತು, ಆದರೆ ಹೆಚ್ಚುವರಿ ನೀರಿನ ಮೇಲೆ ಕಣ್ಣಾಗಿರುವ ತಮಿಳುನಾಡು ಅದಕ್ಕಾಗಿ ಮೇಕೆದಾಟು ಯೋಜನೆಗೆ ತಡೆಯಾಕುತ್ತಿದೆ ಎಂದು ವಿವರಿಸಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಾದಾಗ ಸಿಗುವ ಹೆಚ್ಚುವರಿ ನೀರು ಬಳಸಿಕೊಳ್ಳಲು ನ್ಯಾಯಾಧೀಕರಣದಲ್ಲಿ ಪರಿಹಾರ ಸಿಗದ ಹಿನ್ನಲೆ ಹಾಗೂ ಸಂಕಷ್ಟ ಕಾಲದಲ್ಲಿ ನೀರು ನಿರ್ವಹಣೆ ಸೂತ್ರ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.
ನ್ಯಾಯಾಧೀಕರಣದ ತೀರ್ಪಿನಲ್ಲಿ ಕೆ ಆರ್ ಎಸ್ ನಿಂದ 52 ಟಿಎಂಸಿ, ಕಬಿನಿಯಿಂದ 60 ಹಾಗೂ ಜಲಾಶಯಗಳ ಮುಂಭಾಗದ ಪ್ರದೇಶದಿಂದ ಮಳೆಯಾಶ್ರಿತ ನೀರು 80 ಟಿಎಂಸಿ ಬಿಡಬೇಕಾಗಿದೆ, ಮಳೆ ಕೊರತೆ ಯಾದಾಗಲೂ ಜಲಾಶಯಗಳಿಂದ ನೀರು ಬಿಡಬೇಕೆನ್ನುವುದು ಪ್ರಸ್ತುತ ಸಂಕಷ್ಟಕ್ಕೆ ಕಾರಣವಾಗಿದೆ. ಸಂಕಷ್ಟ ಸಮಯದಲ್ಲಿ ಕರ್ನಾಟಕ ಇದರ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಅದೇ ರೀತಿ ಅಂತರ್ಜಲದ 10 ಟಿಎಂಸಿ ನೀರನ್ನು ತಮಿಳುನಾಡು ಬಳಕೆ ಮಾಡಿಕೊಳ್ಳಲು ಅವಕಾಶವಿದೆ, ಇದನ್ನು ಜೂನ್, ಜುಲೈ ತಿಂಗಳಿನಲ್ಲಿ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರೆ ಸಮಸ್ಯೆ ಎದುರಾಗುವುದಿಲ್ಲ ಎಂದರು.
ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಿ ಉಳಿದಿರುವ ಬಾಕಿ 26 ರಿಂದ 27 ಟಿಎಂಸಿ ನೀರನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಬೇಕಾಗಿದೆ, ಅದೇ ರೀತಿ ಜಲಾನಯನ ಪ್ರದೇಶದ ನೀರಿನ ಸದ್ಬಳಕೆ ಹಾಗೂ ನೀರಿನ ಮಿತ ಬಳಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಕೇರಳದ ಜೊತೆ ಮಾತುಕತೆ ನಡೆಸಿ ಕುಂಗನಹಳ್ಳಿ ಸಮೀಪ ಸೇತುವೆ ಇರುವ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅಣೆಕಟ್ಟು ನಿರ್ಮಾಣ ಮಾಡಿದರೆ 10 ಟಿಎಂಸಿ ನೀರು ಸಿಗಲಿದೆ, ಬೆಂಗಳೂರಿಗೆ ಸರಬರಾಜು ಮಾಡುವ ಕುಡಿಯುವ ನೀರಿನಲ್ಲಿ ಐದು ಟಿಎಂಸಿ ಉಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.




