Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿ.ಸಿ ನಾಲೆಗೆ ಉರುಳಿದ ಕಾರು: ಓರ್ವ ಸಾವು – ಇಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಮಾಚಹಳ್ಳಿ ಗ್ರಾಮದ ಬಳಿ ವಿ.ಸಿ ನಾಲೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮತ್ತಿಬ್ಬರು ನೀರಿನಲ್ಲಿ ಮುಳುಗಿರುವ ಶಂಕೆವ್ಯಕ್ತವಾಗಿದೆ.

ಮಂಡ್ಯದ ಹಾಲಹಳ್ಳಿಯ ನಾಲ್ವರು ಇಂಡಿಕಾ ಕಾರಿನಲ್ಲಿ ಪಾಂಡವಪುರದಿಂದ ಮಂಡ್ಯಕ್ಕೆ ಬರುವ ವೇಳೆ
ಮಧ್ಯಾಹ್ನ 12.30 ರ ಸಮಯದಲ್ಲಿ ಮಾಚಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿ.ಸಿ ನಾಲೆಗೆ ಕಾರು ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಕಾರು ಮಾಲೀಕ ಫಯಾಜ್ ಮೃತಪಟ್ಟಿದ್ದು, ನಯಾಜ್ ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಪೀರ್ ಖಾನ್ ಹಾಗೂ ಅಸ್ಲಂ ಪಾಷ ನಾಪತ್ತೆಯಾಗಿದ್ದು, ಅವರಿಬ್ಬರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನರು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿದರು.

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಜಗದೀಶ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಶಿವಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿ.ಸಿ ನಾಲೆಯಿಂದ ಕಾರನ್ನು ಹೊರ ತೆಗೆಯಲು ಮುಂದಾಗಿದ್ದಾರೆ.

ಗ್ರಾಮಸ್ಥರ ಆಕ್ರೋಶ

ಘಟನೆ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಡೆಗೋಡೆ ಇಲ್ಲದ ಕಾರಣಕ್ಕೆ ಕಾರು ವಿ.ಸಿ ನಾಲೆಯಲ್ಲಿ ಮುಳುಗಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದು, ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡುತ್ತದೆ. ಆದರೆ ಕೆಲ ದಿನಗಳಲ್ಲಿ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗುತ್ತಿದ್ದಂತೆ ಸುಮ್ಮನಾಗುತ್ತಾರೆ.ಹೀಗೆ ಮತ್ತೊಂದು ಅವಘಡ ಸಂಭವಿಸಿದಾಗಲೇ ಅವರು ಮತ್ತೆ ತಡೆಗೋಡೆ ಬಗ್ಗೆ ಮಾತನಾಡುವುದು. ಪ್ರತಿದಿನ ಈ ಮಾರ್ಗದಲ್ಲಿ ಹತ್ತಾರು ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತವೆ.ಈ ದುರ್ಘಟನೆಯಿಂದ ನಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಾಗುತ್ತಿದೆ ಎಂದು ದೂರಿದರು.

ಇಂತಹ ದುರ್ಘಟನೆಗಳು ಹಿಂದೆ ಆದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಬಂದು ತಡಗೋಡೆ ನಿರ್ಮಿಸುವ ಆಶ್ವಾಸನೆ ನೀಡಿದ್ದರೂ,ಇನ್ನೂ ತಡೆಗೋಡೆ ನಿರ್ಮಿಸಿಲ್ಲ.ಮನುಷ್ಯನ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ.ಈ ಕೂಡಲೇ ಸ್ಥಳೀಯ ಶಾಸಕರು ಇಲ್ಲಿಗೆ ಬರಬೇಕು.ತಡಗೋಡೆ ನಿರ್ಮಿಸಲು ಆಗ್ರಹ ಮಾಡಬೇಕು. ಅಲ್ಲಿಯವರೆಗೂ ಈ ರಸ್ತೆಯನ್ನೇ ಬಂದ್ ಮಾಡಿ ಸಾರ್ವಜನಿಕರ ಪ್ರಾಣವನ್ನು ಉಳಿಸಬೇಕೆಂದು ಆಕ್ರೋಶದಿಂದಲೇ ನುಡಿದರು.
ಈ ಹಿಂದೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ವಿಸಿ ನಾಲೆಗೆ ಕಾರು ಉರುಳಿ ಬಿದ್ದು ಐದು ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಮಂಡ್ಯ ಜಿಲ್ಲೆಯಲ್ಲಿ ನೂರಾರು ಕಿ.ಮೀ. ವಿಸಿ ನಾಲೆ ಇದೆ.ಎಲ್ಲೆಡೆ ತಡೆಗೋಡೆ ನಿರ್ಮಿಸದ ಕಾರಣದಿಂದಲೇ,ಆಗಾಗ್ಗೆ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಇನ್ನಾದರೂ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಈ ಬಗ್ಗೆ ಗಮನ ಹರಿಸಿ ತಡಗೋಡೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ‌.

ತಡೆಗೋಡೆ ನಿರ್ಮಿಸಲಿ

ತಿಬ್ಬನಹಳ್ಳಿ (ಜಯಪುರ) ಬಳಿ ವಿ.ಸಿ.ನಾಲೆಯ ಒಂದು ಬದಿಗೆ ತಡೆಗೋಡೆಯನ್ನು ಆರು ಅಡಿ ಎತ್ತರದಲ್ಲಿ ನಿರ್ಮಿಸಿದರೆ ಶಾಶ್ವತ ಪರಿಹಾರ ಸಿಗುತ್ತದೆ.

ಈ ಭಾಗದಲ್ಲಿ ಮಂಡ್ಯ, ಪಾಂಡವಪುರ ತಾಲೂಕಿನ ಶಾಲಾ ಕಾಲೇಜಿಗೆ ಹೋಗುವ ಖಾಸಗಿ ಸಂಸ್ಥೆ ಬಸ್ಸುಗಳು ಸೇರಿದಂತೆ ಸರ್ಕಾರಿ ಬಸ್ಸುಗಳು ಓಡಾಡುತ್ತವೆ. ಹಾಗೆಯೇ ಈ ಭಾಗದ ತರಕಾರಿ, ಕಬ್ಬು, ಭತ್ತ ಬೆಳೆಯುವ ರೈತರ ಸಾಗಾಣಿಕೆಯು ಇದೇ ದಾರಿಯಲ್ಲಿ ನಡೆಯುತ್ತದೆ. ಮಂಡ್ಯದಿಂದ ಹುಲಿಕೆರೆ ಮಾರ್ಗ ಪಾಂಡವಪುರ ಮೈಸೂರು ಬೆಂಗಳೂರಿಗೆ ಹೋಗುವ ಖಾಸಗಿ ವಾಹನ ಸೇರಿದಂತೆ ಇತರ ಹಳ್ಳಿಗಳಿಗೆ ಹೋಗುವ ಬಸ್ಸುಗಳು ಕೂಡ ಇದೇ ಹಾದಿಯಲ್ಲಿ ಸಾಗುತ್ತವೆ.ಈ ಹಿನ್ನೆಲೆಯಲ್ಲಿ ಈ ಕೂಡಲೇ ತಡಗೋಡೆ ನಿರ್ಮಿಸಬೇಕು.

ಜಯಪುರ ಬಳಿ ನಾಮಕಾವಸ್ತೆಗೆ ಅರ್ಧ ಕಿ.ಮೀ ಮಾತ್ರ ತಾತ್ಕಾಲಿಕ ತಡೆಗೋಡೆ ನಿರ್ಮಿಸಿರುತ್ತಾರೆ.
ಮುಂದೆ ಈ ರೀತಿಯ ಅನಾಹುತಗಳಾಗದಂತೆ ತಡೆಯಬೇಕಾದರೆ ನಾಲೆಯ ಪಕ್ಕ ತಡೆಗೋಡೆ ಹಾಗೂ ಹೆಚ್ಚುವರಿ ಜಾಗವನ್ನು ವಿಸ್ತರಿಸಿ ಪೂರ್ಣ ಪ್ರಮಾಣದ ರಸ್ತೆಯನ್ನು ಮಾಡಿದರೆ ಮಾತ್ರ ಸಾಧ್ಯ. ಈಗಲಾದರೂ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಇದರ ಬಗ್ಗೆ ಗಮನ ಹರಿಸಬೇಕೆಂದು

ಜಯಪುರ ಗ್ರಾಮಸ್ಥರಾದ ಜೆ.ಕೆ. ಬಸವರಾಜು, ಆಟೋ ಜಗದೀಶ ಜೆ.ಪಿ. ಕುಮಾರ್ ಆಗ್ರಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ