ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆಯಲ್ಲಿ ಹರಿಯುವ ಸಿ.ಡಿ.ಎಸ್ ನಾಲೆ ಒಡೆದು ರೈತರ ಬೆಳೆ ಹಾನಿಯಾಗಿರುವ ಸ್ಥಳಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿ ಮಾತನಾಡಿದ ಅವರು ಭಾರಿ ಮಳೆ ಉಂಟಾಗಿರುವುದರಿಂದ ಸಿ.ಡಿ.ಎಸ್ ನಾಲೆ ಒಡೆದು ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ, ಮಳೆ ನಿಂತ ನಂತರ ಜಂಟಿ ಸರ್ವೆ ಕಾರ್ಯಾಚರಣೆ ನಡೆಸಿ ಯಾರ ಬೆಳೆ ಎಷ್ಟು ಹಾನಿಯಾಗಿದೆ ಎಂದು ತಿಳಿದುಕೊಂಡು ಅಂದೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಸರ್ವೇ ನಿಂತರವೇ ಎಷ್ಟು ಎಕರೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಯುತ್ತದೆ ಎಂದರು.
ಸಿ.ಡಿ.ಎಸ್ ನಾಲೆ ನೀರನ್ನು ನಿಲ್ಲಿಸಲಾಗಿದೆ, ಮಳೆ ನಿಂತ ನಂತರ ಒಡೆದ ನಾಲೆಯನ್ನು ಸರಿಪಡಿಸಲಾಗುವುದು, ಎನ್ ಡಿ ಆರ್ ಎಸ್ ನಲ್ಲಿ 1 ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ ಎಂಟುವರೆ ಸಾವಿರ, ನೀರಾವರಿ ಆಶ್ರಿತ ಬೆಳೆಗಳಿಗೆ ಹದಿನೇಳು ಸಾವಿರ, ತೋಟಗಾರಿಕೆ ಬೆಳೆಗೆ ಇಪ್ಪತ್ತೇರಡು ಸಾವಿರದ ಐನೂರು ಪರಿಹಾರ ನೀಡಲಾಗುತ್ತಿದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ರೈತರ ಬೇಡಿಕೆಯಂತೆ ಎಲ್ಲಾ ಬಗೆಯ ಬೆಳೆಗಳಿಗೂ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಎಂಟುವರೆ ಸಾವಿರ ನೀಡುವುದಾಗಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಂಟಿ ಸರ್ವೆ ನಡೆದ ತಕ್ಷಣ ಯಾರು ಕಾಯುವಂತಿಲ್ಲ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ ಮಾರನೇ ದಿನಕ್ಕೆ ಪರಿಹಾರವನ್ನು ನೀಡಲಾಗುವುದು, ಈ ಪ್ರಕ್ರಿಯೆಯು ಮಳೆ ನಿಂತ ಒಂದು ವಾರದೊಳಗೆ ಮಾಡಲಾಗುತ್ತದೆ, ರೈತರು ತಮ್ಮ ಬೆಳೆಗಳಿಗೆ ಇನ್ಸೂರೆನ್ಸ್ ಮಾಡಿಸಿದ್ದರೆ ಇನ್ಸೂರೆನ್ಸ್ ಹಣದ ಜೊತೆ ಸರ್ಕಾರ ಪರಿಹಾರವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಬಾಬು ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಸಿಇಓ ಕೆ ಆರ್ ನಂದಿನಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್, ನೀರಾವರಿ ನಿಗಮದ ಎಸ್ಸಿಇ ರಘುರಾಮ್, ಕಾರ್ಯಪಾಲಕ ಇಂಜಿನಿಯರ್ ಜಯಂತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




