ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದ ದಸಂಸ ಕಾರ್ಯಕರ್ತರು ರೈತ ಮತ್ತು ದಲಿತ ವಿರೋಧಿ ಬಜೆಟ್ ಮಂಡಿಸಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ನಡೆ ಖಂಡಿಸಿ, ಬಿಜೆಪಿ ಹಠಾವೋ ಭಾರತ್ ಬಚಾವೋ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಯವರಿಗೆ ಮನವಿ ಸಲ್ಲಿಸಿದರು.
ಬಡ ಜನತೆ. ರೈತರು, ಕಾರ್ಮಿಕರು, ದಲಿತ ಸಮುದಾಯಕ್ಕೆ ಕನಿಷ್ಠ ಅನ್ನಕ್ಕೂ ಖಾತ್ರಿ ಇಲ್ಲದ ಜನ ವಿರೋಧಿ ಬಜೆಟ್ ಮಂಡನೆ ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಪಡಿಸಿ ಮುಚ್ಚಿಸಬೇಕು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಜೀವ ಬೆದರಿಕೆ ಹಾಕಿರುವ ಸಚಿವ ಡಾ.ಅಶ್ವಥ್ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತಾಯಿಸಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಎಸ್ಸಿ/ ಎಸ್ಟಿ, ಟಿ ಎಸ್ ಪಿ ಉಪ ಯೋಜನಾ ಕಾಯ್ದೆಯನ್ನು ಜಾರಿಗೊಳಿಸಿಬೇಕು,ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು, ಭಾರತ ಬುದ್ಧ ಧಮ್ಮ ಸ್ಮಾರಕ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.
ಎಸ್ ಸಿ ಎಸ್ ಪಿ, ಟಿ ಎಸ್ ಪಿ ಉಪ ಯೋಜನಾ ಕಾಯ್ದೆ (2013) ರ ಕಲಂ 7 (ಡಿ ) ಸೇರ್ಪಡೆ ಮಾಡಿ ಅನ್ಯಾಯ ಮಾಡಿರುವುದನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು, ಮೀಸಲು ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ಘೋಷಿಸಬೇಕು. ಮಂಡ್ಯ ಜಿಲ್ಲೆಯ ಹೇಮಾವತಿ ನೀರು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ಅರೆ ಖುಷ್ಕಿ ಬೆಳೆಗೆ ನೀರು ಒದಗಿಸಲು ನಾಲೆ ಆಧುನಿಕರಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,ಮುಖಂಡರಾದ ಕೆ.ಎಂ ಶ್ರೀನಿವಾಸ್, ನಾಗರಾಜ್, ಎಚ್. ಬಿ ಹರಿಕುಮಾರ್, ಬಾಲರಾಜ್, ವೈ.ಸುರೇಶ್ ಕುಮಾರ್, ಮಾರಪ್ಪ, ವೈ.ಎನ್ ಮಮತಾ ಸ್ವಾಮಿ,ಮಹಾದೇವ್ ಕೊತ್ತತ್ತಿ, ಬಿ.ಎಂ. ಸೋಮಶೇಖರ್ ಉಪಸ್ಥಿತರಿದ್ದರು.




