ಕ್ರೀಡಾಪಟುಗಳು ಕ್ರೀಡೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಸ್ಪರ್ಧೆ ಮಾಡಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಕಿವಿಮಾತು ಹೇಳಿದರು.
ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ 75ನೇ ವರ್ಷದ ಅಮೃತ ಮಹೋತ್ಸವ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ ನಡೆದ ನಾಗಮಂಗಲ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಸಿಗಬಹುದು, ಪ್ರಥಮ ಸ್ಥಾನ ಸಿಗಲಿಲ್ಲ ಅಂದರೆ ನಿರಾಸದಾಯಕವಾಗಬಾರದು. ಕ್ರೀಡೆಯಲ್ಲಿ ಎಷ್ಟೇ ಜನ ಸ್ಪರ್ಧಿಸಿದರೂ, ಪ್ರಥಮ ಸ್ಥಾನ ಸಿಗುವುದು ಒಬ್ಬರಿಗೆ. ಆದ್ದರಿಂದ ಪ್ರಥಮ ಸ್ಥಾನ ಸಿಗಲಿಲ್ಲ ಎಂಬ ಬೇಸರ ಬೇಡ ಎಂದರು.
ಚಂದ್ರಯಾನ ಉಡಾವಣೆ ಯಶಸ್ವಿಯಾಗಿದ್ದು, ಇದರಲ್ಲಿ ನಮ್ಮ ಜಿಲ್ಲೆ ಹಾಗೂ ತಾಲ್ಲೂಕಿನ ವಿಜ್ಞಾನಿಗಳು ಇದ್ದದ್ದು, ನಮ್ಮ ಜಿಲ್ಲೆಗೆ ನಮಗೂ ವೈಯಕ್ತಿಕವಾಗಿ ಹೆಮ್ಮೆ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ನಹೀಂ ಉನ್ನೀಸಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಉಮೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.




