Friday, November 20, 2026

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ: ಚಲುವರಾಯಸ್ವಾಮಿ

ರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಹಾಗೂ 200 ಕೋಟಿ‌ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಇಂದು ನಡೆದ ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಂಡ್ಯ ಇವರ ಸಹಭಾಗಿತ್ವದಲ್ಲಿ ಜಲಾನಯನ ಮೇಳ ಹಾಗೂ ಫಲಾನುಭವಿಗಳಿಗೆ ಬೃಹತ್ ಪ್ರಮಾಣದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಿಂದ ಸ್ಪಂದನೆ ಇಲ್ಲ

ರಾಜ್ಯದಲ್ಲಿ 223 ತಾಲ್ಲೂಕಿನಲ್ಲಿ ಬರ ಇದೆ. 17000 ಕೋಟಿ ರೂ ಪರಿಹಾರ ಕೋರಿದ್ದೇವೆ, ಕೇಂದ್ರದಿಂದ ಇವರೆಗೂ ಯಾವುದೇ ನೆರವು, ಪೂರಕ ಸ್ಪಂದನೆ ದೊರೆತಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರ ಪರ 1500 ಕೋಟಿ ವಿಮೆ ಹಣ ಪಾವತಿ‌‌ ಮಾಡಿದೆ. 230 ಕೋಟಿ ವಿಮೆ ರೈತರಿಗೆ ಈಗಾಗಲೇ ಪಾವತಿಯಾಗಿದೆ. ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ. ಅಧಿಕಾರಕ್ಕೆ ಬಂದ ಕೂಡಲೆ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದರು.

ರಾಜ್ಯಾದ್ಯಂತ ಸಂಪೂರ್ಣ ಮಳೆಯಾಶ್ರಿತ ಪ್ರದೇಶದಲ್ಲಿ ಜಲಾನಯನ ಇಲಾಖೆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಹಲವು‌ ನೆರವು ನೀಡಲಾಗುತ್ತಿದೆ. ಸೌಲಭ್ಯ ವಿತರಿಸಲಾಗುತ್ತಿದೆ. ದೇವಲಾಪುರ ಹಾಗೂ ದೇವರ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 17 ಗ್ರಾಮಗಳ 1,689 ರೈತರಿಗೆ
ಶೇ 80 ಪ್ರತಿಶತ ಸಬ್ಸಿಡಿಯೊಂದಿಗೆ 2 ಕೋಟಿಗೂ ಅಧಿಕ ಸಹಾಯಧನದಲ್ಲಿ ಜೀವನೋಪಾಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆಗಳು ಜಾರಿಯಾಗಲಿವೆ ಎಂದು ತಿಳಿಸಿದರು.

ಹೇಮಾವತಿ ಜಲಾಶಯದಿಂದ ಮಂಡ್ಯ ಜಿಲ್ಲೆಗೆ ನೀರು ಹರಿಸುವ ನಾಲೆಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ. ರಾಜ್ಯದಲ್ಲಿ 13000 ಶಿಕ್ಷಕರ ನೇಮಕಾತಿ ಮಾಡಲಾಗುವುದು ವಿವಿಧ ಇಲಾಖೆಗಳ ಖಾಲಿ ಹುದ್ದೆ ಭರ್ತಿಗೂ ಕ್ರಮವಹಿಸಲಾಗುವುದು ಎಂದು ಹೇಳಿದರು.

ಮೇಳಗಳು ಹೆಚ್ಚು ನಡೆಯಬೇಕು

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ಮಹಾಸ್ವಾಮೀಜಿ ಮಾತನಾಡಿ, ರೈತರಿಗೆ ವಿವಿಧ ಮೇಳ ಆಯೋಜಿಸಿ ಸರ್ಕಾರದ ವಿವಿಧ ಸವಲತ್ತುಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ಒದಗಿಸುತ್ತಿರುವುದು ಸ್ವಾಗತಾರ್ಹ. ಇಂತಹ ಮೇಳಗಳು ರಾಜ್ಯಾದ್ಯಂತ ಹೆಚ್ಚು ನಡೆಯಬೇಕು ಎಂದರು.

ರೈತರು ಸದಾ ದೇಶದ ಶಕ್ತಿ. ಹಳ್ಳಿಗಳು ಹಾಗೂ ಕೃಷಿಕರು ಉಳಿದರೆ ಮಾತ್ರ ದೇಶ ಉಳಿದು, ಆರ್ಥಿಕತೆ ಹೆಚ್ಚುತ್ತದೆ.
ರೈತರು ಕೃಷಿ ನಡೆಸಿದ ಸಂದರ್ಭದಲ್ಲಿ ತಾವು ಬೆಳೆದ ಬೆಳೆಯನ್ನು ತಕ್ಷಣ ಮಾರಾಟ ಮಾಡಿದರೆ ಲಾಭ ಕಡಿಮೆ, ಅದರ ಬದಲಾಗಿ ಸೆಕೆಂಡರಿ ಕೃಷಿ ಅಳವಡಿಸಿಕೊಂಡು, ಕೆಲವು ದಿನ ಸಂರಕ್ಷಿಸಿ ಮಾರಾಟ ಮಾಡಿದರೇ ಲಾಭ ಹೆಚ್ಚು ಎಂದರು.

1,689 ರೈತರಿಗೆ ₹2 ಕೋಟಿ ಸಹಾಯಧನದ ಸಲಕರಣೆ ವಿತರಣೆ

ಜಲಾನಯನವ ಕಾರ್ಯಕ್ರಮದಲ್ಲಿ ರೈತರ ಜೀವನೋಪಾಯ ಚಟುವಟಿಕೆ, ಉತ್ಪದನಾ ಪದ್ಧತಿ ಹಾಗೂ ಖುಷ್ಕಿ ತೋಟಗಾರಿಕೆ ಘಟಕದಡಿ ಪಲ್ವರೈಸರ್ (ಹಿಟ್ಟಿನ ಗಿರಣಿ), ಎಣ್ಣೆ ಗಾಣ, ಹಪ್ಪಳ ಮಾಡುವ ಯಂತ್ರ, ನಾಟಿ ಕೋಳಿ, ಪೈಬರ್ ದೋಟಿ, ಲ್ಯಾಡರ್, ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ದೇವಲಾಪುರ ಹೋಬಳಿಯ ವ್ಯಾಪ್ತಿಯ ರೈತರಿಗೆ ನೀಡಲಾಯಿತು‌.

153 ಜನರಿಗೆ 1 ಹೆಚ್ ಪಿ ಹಿಟ್ಟಿನ ಗಿರಣಿ, 40 ಜನರಿಗೆ 2 ಹೆಚ್ ಪಿ ಹಿಟ್ಟಿನ ಗಿರಣಿ, 10 ಜನರಿಗೆ 3 ಹೆಚ್ ಪಿ ಹಿಟ್ಟಿನ ಗಿರಣಿ, 20 ಜನರಿಗೆ 0.5 ಹೆಚ್‌‌ಪಿ ಎಣ್ಣೆ ಗಾಣ, 8 ಜನರಿಗೆ ಹಪ್ಪಳ ಮಾಡುವ ಯಂತ್ರ, 288 ರೈತರಿಗೆ ಹಸಿರೆಲೆ ಗೊಬ್ಬರದ ಬೀಜ, 60 ಜನರಿಗೆ ಲಘು ನೀರಾವರಿ ಘಟಕ, 70 ರೈತರಿಗೆ ಜೇನು ಪೆಟ್ಟಿಗೆ, 116 ರೈತರಿಗೆ ಮೇವು ಕತ್ತರಿಸುವ ಯಂತ್ರ, 50 ರೈತರಿಗೆ ಫೈಬರ್ ದೋಟಿ, 160 ರೈತರಿಗೆ ಹಿತ್ತಲ ಕೋಳಿ ಸಾಕಾಣಿಕೆ, 20 ರೈತರಿಗೆ ತೆಂಗಿನ ಮರ ಹತ್ತುವ ಯಂತ್ರ, ಜಲಾನಯನ ಯೋಜನೆಯಡಿ ರಚಿತವಾಗಿರುವ 35 ಸ್ವಸಹಾಯ ಗುಂಪುಗಳಿಗೆ ಪ್ರತಿ ಸಂಘಕ್ಕೆ 50 ಸಾವಿರ ರೂ ಸಹಾಯಧನ ಹಾಗೂ 900 ರೈತರಿಗೆ ಪೌಷ್ಟಿಕ ಕೈ ತೋಟಕ್ಕೆ ಸಹಾಯಧನ ಒಟ್ಟಾರೆ 1629 ರೈತರಿಗೆ 2 ಕೋಟಿ ರೂ ಸಹಾಯಧನ ಪಾರದರ್ಶಕವಾಗಿ ವಿತರಿಸಿದ್ದು ವಿಶೇಷವಾಗಿತ್ತು.

ಜಲಾನಯನ ಯೋಜನೆ ಅನುಮೋದನೆ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ-2.0 ಯೋಜನೆಯಡಿ ನಾಗಮಂಗಲ ತಾಲ್ಲೂಕಿನ ದೇವಲಾಪುರ ಹಾಗೂ ದೇವರಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 17 ಗ್ರಾಮಗಳ 4,138 ಹೆಕ್ಟೇರ್ ವಿಸ್ತೀರ್ಣ ದಲ್ಲಿ ರೂ 910.43 ಲಕ್ಷ ಯೋಜನಾ ಮೊತ್ತದಲ್ಲಿ ಜಲಾನಯನ ಯೋಜನೆ ಅನುಮೋದನೆಯಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಲಾನಯನ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ