ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ 15 ಬಜೆಟ್ ಮಂಡಿಸಿದ್ದು, ಪ್ರಸ್ತುತ ಸಾಲಿನಲ್ಲಿ ಮಂಡಿಸಿರುವ ಬಜೆಟ್ ಅತ್ಯಂತ ಜನಸ್ನೇಹಿ, ರೈತರ ಪರ, ಮಹಿಳಾ ಪರ ಬಜೆಟ್ ಆಗಿದೆ. ಇದೊಂದು ಸಮತೋಲಿತ ಮತ್ತು ದೂರದೃಷ್ಟಿ ಚಿಂತನೆಗಳ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಕಲ್ಪಿಸುವ ಬಜೆಟ್ ಆಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಸಮ ಸಮಾಜದ ನಿರ್ಮಾಣದ ಪರಿಕಲ್ಪನೆಯೊಂದಿಗೆ ಎಲ್ಲಾ ವರ್ಗಗಳ ಜನರಿಗೂ, ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸಲಾಗಿದೆ. ತೆರಿಗೆ ಹೊರೆ ಹೆಚ್ಚಿಸದೆ ಅಧಿಕ ನೆರವುಗಳ ನೀಡಿದ ಬಜೆಟ್ ಇದಾಗಿದೆ. ರೈತರು, ರೈತ ಮಹಿಳೆಯರ ಸಬಲೀಕರಣ ಹಾಗೂ ಸುಸ್ಥಿರ, ಸಮಗ್ರ ಕೃಷಿ ಅಭಿವೃದ್ಧಿಗೆ ದೂರಗಾಮಿ ಯೋಜನೆಗಳ ಜಾರಿ ಅಭಿನಂದನೀಯ ಎಂದು ಹೇಳಿದ್ದಾರೆ.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ನೀರಾವರಿಗಳಿಗೆ ವಿಶೇಷ ಆದ್ಯತೆ ನೀಡುವ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೌಕರ್ಯ ತಂತ್ರಜ್ಞಾನಗಳ ವಿಸ್ತರಣೆಗೆ ಒತ್ತು ನೀಡಿರುವುದು, ಕೃಷಿಯಲ್ಲಿ ಸಮಗ್ರ ಅಭಿವೃದ್ಧಿಗೆ ಅವಕಾಶಗಳನ್ನು ಹೆಚ್ಚಿಸಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಗೆ ಭಾರಿ ಕೊಡುಗೆ: ದಿನೇಶ್ ಗೂಳಿಗೌಡ
ಈ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯ ರೈತರ ಹಿತವನ್ನು ಕಾಪಾಡಿದ್ದಾರೆಂದು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುವುದು ಇರಬಹುದು, ಕಾವೇರಿ ನೀರಾವರಿ ನಿಗಮದ ಮುಖಾಂತರ ನಾಲೆಗಳ ಆಧುನೀಕರಣಕ್ಕೆ ಒತ್ತುಕೊಟ್ಟಿರುವುದು ಇರಬಹುದು, ಕೃಷ್ಣರಾಜ ಸಾಗರವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡಲು ಸುಸಜ್ಜಿತ ಉದ್ಯಾನವನ ಹಾಗೂ ಬೃಂದಾವನವನ್ನು ನಿರ್ಮಾಣ ಮಾಡುವುದು ಇರಬಹುದು, ಮಂಡ್ಯದ ವಿಸಿ ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಯಲವನ್ನು ತೆರೆಯುವುದು ಇರಬಹುದು ಇವೆಲ್ಲ ಜಿಲ್ಲೆಗೆ ಬೇಕಾದ ಪ್ರಮುಖ ಅಂಶಗಳಾಗಿದ್ದವು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲು ಕಾರಣೀಭೂತರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.




