Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಅಭಿವೃದ್ದಿ ಕೈಗೊಂಡರೆ ಹೆಚ್.ಡಿ.ರೇವಣ್ಣ ಅಡ್ಡಗಾಲು : ಚಲುವರಾಯಸ್ವಾಮಿ

ನಾವು ಮಂಡ್ಯ ಜಿಲ್ಲೆಯ ಅಭಿವೃದ್ದಿಯ ಬದ್ದತೆಗಾಗಿ ಕೃಷಿ ವಿ.ವಿ. ಆರಂಭಿಸಲು ಮುಂದಾದರೆ, ಕೇಂದ್ರ ಸಚಿವ (ಹೆಚ್.ಡಿ.ಕುಮಾರಸ್ವಾಮಿ) ಅವರ ಸಹೋದರ ಹೆಚ್.ಡಿ.ರೇವಣ್ಣ ರಾಜ್ಯಪಾಲರಿಗೆ ದೂರು ನೀಡುತ್ತಾರೆ, ಈ ಬಗ್ಗೆ ಮಂಡ್ಯ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಅವರು ತುಟಿ ಬಿಚ್ಚುತ್ತಿಲ್ಲ ಏಕೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

ಮಂಡ್ಯ ನಗರದ ಎ & ಎ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ‘ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ’ ಸಭೆ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಮಹಾರಾಜರ ದೂರದೃಷ್ಠಿಯಿಂದ ಜನ್ಮ ತಳೆದ ವಿ.ಸಿ.ಫಾರಂನಲ್ಲಿ ಕೃಷಿ ವಿ.ವಿ ತೆರೆಯಲು ಮುಂದಾಗಿದ್ದೇವೆ, ಇದನ್ನು ಕೇಂದ್ರ ಸಚಿವ ಸಹೋದರ ವಿರೋಧಿಸಿದರೆ ಮಂಡ್ಯ ಜಿಲ್ಲೆಯ ಸಂಸದರು ಮೌನಿಯಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲೆಯ ಜನರು ನಮಗೆ ರಾಜಕೀಯ ಶಕ್ತಿ ತುಂಬಿದಾಗ ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ, ಆರೋಗ್ಯ ಸಚಿವನಾಗಿದ್ದಾಗ, ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಅಭಿವೃದ್ದಿ, ಸಾರಿಗೆ ಸಚಿವನಾಗಿದ್ದಾಗ ಬಸ್ ನಿಲ್ದಾಣಗಳ ಅಭಿವೃದ್ದಿ, ಕೆಎಸ್ಆರ್’ಟಿಸಿ ವಿಭಾಗೀಯ ಕಚೇರಿ, ಆರಂಭಿಸಿ ಬದ್ದತೆ ಮೆರೆದಿದ್ದೇನೆ ಎಂದು ಸಚಿವರು ತಿಳಿಸಿದರು.

ಆವಿಷ್ಕಾರಗಳಿಂದ ಕೃಷಿಕರು ಬಲಾಢ್ಯರಾಗುತ್ತಾರೆ

ಪ್ರಸ್ತುತ ಸರ್ಕಾರದಲ್ಲಿ ಮಂಜೂರಾತಿ ಪಡೆದಿರುವ ಕೃಷಿ ವಿಶ್ವವಿದ್ಯಾನಿಲಯ ಆರಂಭದಿಂದ ಕಾವೇರಿ ನದಿ ಪಾತ್ರದ 5 ಜಿಲ್ಲೆಗಳ ರೈತರಿಗೆ, ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನದ ಅರಿವು ಈಗ ವ್ಯಕ್ತವಾಗುವುದಿಲ್ಲ. ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಕೃಷಿಕರು ಬಲಾಢ್ಯರಾಗುತ್ತಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನಾನು ಕೃಷಿ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿದ ಜಿಲ್ಲೆಯ ಮತದಾರರಿಗೆ ನೆರವಾಗಲು ಕೃಷಿ ವಿಶ್ವವಿದ್ಯಾನಿಲಯ ಮಂಜೂರು ಮಾಡಲಾಗಿದೆ, ಇದು ನಮ್ಮ ಬದ್ದತೆ ಎಂದರು.

4 ಕೋಟಿ ಜನರಿಗೆ ಗ್ಯಾರಂಟಿ ಯೋಜನೆ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತುರುವಾಯ ರಾಜ್ಯ 4 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ ತಲುಪುತ್ತಿದೆ. ಜಿಲ್ಲೆಯಲ್ಲಿ ಪ್ರತಿವರ್ಷ 1700 ಕೋಟಿ ರೂ. ಬಳಕೆಯಾಗುತ್ತಿದೆ, ಇದನ್ನು ಮತದಾರರಿಗೆ ಅರ್ಥೈಸಬೇಕು, ಆ ಮೂಲಕ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಶಾಸಕರಾದ ರವಿಕುಮಾರ್ ಗೌಡ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಾಬು,  ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಹೆಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಪ್ಪ, ಅಪ್ಪಾಜಿ, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಮಂಜುನಾಥ್, ಮುಖಂಡರಾದ ಸಿ.ಕೆ.ನಾಗರಾಜು, ಯು.ಸಿ.ಶಿವಕುಮಾರ್, ಚಿದಂಬರ್, ಸಿ.ತ್ಯಾಗರಾಜು, ರವಿ ಬೋಜೆಗೌಡ, ಅಂಜನಾ ಶ್ರೀಕಾಂತ್, ಕೀಲಾರ ರಾಧಕೃಷ್ಣ, ಸಿದ್ದರೂಢ ಸತೀಶ್ ಗೌಡ, ರಾಮಲಿಂಗಯ್ಯ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ