Sunday, November 22, 2026

ಪ್ರಾಯೋಗಿಕ ಆವೃತ್ತಿ

ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳೊಂದಿಗೆ ಆರ್.ಎಸ್.ಎಸ್ ನಾಯಕರ ನಿಕಟ ಸಂಬಂಧ

ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ (ಸಿಎಂಓ)ಯ ಅಧಿಕಾರಿಗಳೊಂದಿಗೆ  ರಾಜ್ಯದ ಆರ್.ಎಸ್.ಎಸ್ ನಾಯಕರು ನಿಕಟ ಸಂಬಂಧ ಹೊಂದಿದ್ದು, ರಾಜ್ಯದಲ್ಲಾಗುವುದು ಹಲವು ಆಗುಹೋಗುಗಳಲ್ಲಿ ಪರೋಕ್ಷವಾಗಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆಂದು ‘ಬೆಂಗಳೂರು ಪೋಸ್ಟ್’ ವರದಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನಿಲುವಿಗೆ ವಿರುದ್ದವಾದ ವ್ಯಕ್ತಿಗಳು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ಧಾರೆ. ಕೆಲವು ಅಧಿಕಾರಿಗಳು RSS ಸಿದ್ಧಾಂತ ಪ್ರತಿಪಾದಿಸುವ ಕೆಲವು ಮುಖಂಡರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಕೆಲವು ಆಡಳಿತಾತ್ಮಕ ಮತ್ತು ನೀತಿ-ಸಂಬಂಧಿತ ವಿಷಯಗಳಲ್ಲಿ ಅವರ (ಆರ್ ಎಸ್ ಎಸ್ ಮುಖಂಡರು) ಅಭಿಪ್ರಾಯಗಳನ್ನು ಪಡೆಯುತ್ತಿದ್ದಾರೆ ಎಂದು blrpost.com ತಿಳಿಸಿದೆ. ಇದು ನಿಜವಾಗಿದ್ದರೆ CMOಯ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವವಾಗುತ್ತವೆ. RSS ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತದ್ದರೂ ದೇಶದಲ್ಲಿ ಎಲ್ಲಿಯೂ ನೋಂದಾಯಿಸಲ್ಪಟ್ಟಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ. ಇದು ರಾಜಕೀಯ ವಲಯಗಳಲ್ಲಿ ಕಳವಳಗಳನ್ನು ಹುಟ್ಟುಹಾಕಿದೆ.

RSS ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಸೈದ್ದಾಂತಿಕವಾಗಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಅಗ್ರಗಣ್ಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ದೇಶದಲ್ಲಿ ನಡೆಯುತ್ತಿರುವ ಬಹುತೇಕ ಕೋಮು ಸಂಘರ್ಷಗಳಿಗೆ ಆರ್ ಎಸ್ ಎಸ್ ಹಾಗೂ ಅದರ ಅಂಗಸಂಸ್ಥೆಗಳು ಕಾರಣ ಎಂದು ಅರಿತಿದ್ದಾರೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರದೊಂದಿಗೆ ಅವರ ಸಂವಹನವು ಕಳವಳವನ್ನು ಹುಟ್ಟು ಹಾಕಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚಿನ ತಿಂಗಳುಗಳಲ್ಲಿ ಸಂಘ ಪರಿವಾರ ಅಜೆಂಡಾಗಳನ್ನು ಖಂಡತುಂಡವಾಗಿ ಪದೇ ಪದೇ ಟೀಕಿಸುತ್ತಿದ್ದಾರೆ. ವಿಶೇಷವಾಗಿ ಆರ್‌ಎಸ್‌ಎಸ್‌ನ ಸಾಂಸ್ಥಿಕ ರಚನೆಯನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ಪಾರದರ್ಶಕತೆ ಮತ್ತು ಹಣಕಾಸಿನ ವ್ಯವಹಾರದ ಬಗ್ಗೆ, ಹಲವು ಕಡೆ ಬಿಜೆಪಿ, ಆರ್ ಎಸ್ ಎಸ್ ನಿರ್ಮಿಸಿರುವ ಐಷಾರಾಮಿ ಕಟ್ಟಡಗಳ ಹಣದ ಮೂಲ ಯಾವುದು ಎಂದು ಪ್ರಶ್ನೆಯೆತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸಂಘ ಪರಿವಾರ ಮುಖ್ಯಸ್ಥರು ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಖ್ಯಮಂತ್ರಿ ಕಚೇರಿಯೊಳಗಿನ ಕೆಲವು ಪ್ರಭಾವಿ ಅಧಿಕಾರಿಗಳು ಭವಿಷ್ಯದ ಚುನಾವಣೆಗಳ ಕುರಿತು ರಾಜಕೀಯ ಲೆಕ್ಕಾಚಾರಗಳೊಂದಿಗೆ ಆರ್‌ಎಸ್‌ಎಸ್ ನಾಯಕರೊಂದಿಗೆ ಚರ್ಚಿಸಿದ್ದಾರೆ  ಎಂದು ಪತ್ರಕರ್ತ ಮತ್ತು ಕಾರ್ಯಕರ್ತ ನವೀನ್ ಸೂರಿಂಜೆ ಹೇಳಿದ್ದಾರೆ. “2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣಾ ಸವಾಲುಗಳನ್ನು ಎದುರಿಸಬಹುದು ಮತ್ತು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಸಿದ್ದರಾಮಯ್ಯ ಅವರ ಕಚೇರಿಯಲ್ಲಿರುವ ಕೆಲವು ಅಧಿಕಾರಿಗಳು ನಂಬುತ್ತಾರೆ. ತಮ್ಮ ವೈಯಕ್ತಿಕ ಮತ್ತು ಅಧಿಕಾರಶಾಹಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಪ್ರಮುಖ ಸರ್ಕಾರಿ ಫೈಲ್‌ಗಳನ್ನು ತೆರವುಗೊಳಿಸುವ ಮೊದಲು ಅವರು ಆರ್‌ಎಸ್‌ಎಸ್ ನಾಯಕರೊಂದಿಗೆ ಅನೌಪಚಾರಿಕ ಸಮಾಲೋಚನೆಗಳನ್ನು ಬಯಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಸೂರಿಂಜೆ ಹೇಳಿದರು.

ಸೂರಿಂಜೆ ಪ್ರಕಾರ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಸೂಕ್ಷ್ಮ ನೀತಿ ವಿಷಯಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ದಲಿತ ಸಂಪರ್ಕ ಕಾರ್ಯಕ್ರಮಗಳಲ್ಲಿ ತೊಡಗಿರುವ ಕೆಲವು ಆರ್‌ಎಸ್‌ಎಸ್ ನಾಯಕರು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳೊಂದಿಗೆ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಸಂವಹನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಈ ಬೆಳವಣಿಗೆಗಳು ಸಿಎಂಒದ ವಿಶ್ವಾಸಾರ್ಹತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತವೆ” ಎಂದು ಸೂರಿಂಜೆ ಹೇಳಿದ್ದಾರೆ. ಆಡಳಿತಾತ್ಮಕ ನಿರ್ಧಾರಗಳು ಸಾಂವಿಧಾನಿಕ ಆಡಳಿತ ಮತ್ತು ಪ್ರಜಾಪ್ರಭುತ್ವ ಹೊಣೆಗಾರಿಕೆಯ ಚೌಕಟ್ಟಿನೊಳಗೆ ಇರಬೇಕು ಎಂದು ಹೇಳಿದರು.

2025 ರ ನವೆಂಬರ್‌ನಲ್ಲಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸ್ವಲ್ಪ ಮೊದಲು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ಬಿಜೆಪಿ ಕರ್ನಾಟಕದ ಮಾಜಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜಿವಿ ರಾಜೇಶ್ ಅವರೊಂದಿಗೆ ಕೊಠಡಿಯ ಬಾಗಿಲು ಮುಚ್ಚಿ ಸಭೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮತ್ತೊಂದು ಉನ್ನತ ಮೂಲ ಹೇಳಿಕೊಂಡಿದೆ.

“ಜಿ” ಎಂದು ಗೌರವಯುತವಾಗಿ ಕರೆಯಲ್ಪಡುವ ವ್ಯಕ್ತಿಗಳು – ಹಿರಿಯ ನಾಯಕರನ್ನು ಉದ್ದೇಶಿಸಿ ಆರ್‌ಎಸ್‌ಎಸ್ ವಲಯಗಳಲ್ಲಿ ಹೆಚ್ಚಾಗಿ ಬಳಸುವ ಪದ- ಇದು ಮುಖ್ಯಮಂತ್ರಿ ಕಚೇರಿಯ ಕಾರಿಡಾರ್‌ಗಳಲ್ಲಿ ಗಣನೀಯ ಅನೌಪಚಾರಿಕ ಪ್ರಭಾವ ಬೀರಲು ಪ್ರಾರಂಭಿಸಿದ್ದಾರೆ ಎಂದು ಸೂರಿಂಜೆ ಹೇಳಿದ್ದಾರೆ. ಅವರ ಪ್ರಕಾರ, ಈ ಪ್ರವೃತ್ತಿ ಸಾರ್ವಜನಿಕ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ನೀತಿಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಬದಿಗಿಡುವ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಆರ್ ಎಸ್ ಎಸ್ ನೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳನ್ನು ನಿಯಂತ್ರಿಸದಿದ್ದರೆ, ಈ ಬೆಳವಣಿಗೆಗಳು ಅಂತಿಮವಾಗಿ ಮುಖ್ಯಮಂತ್ರಿ ಕಚೇರಿಗೆ ಅಪಖ್ಯಾತಿ  ತರಬಹುದು ಎಂದು ಸೂರಿಂಜೆ ಎಚ್ಚರಿಸಿದ್ದಾರೆ.

ಕೃಪೆ : ಬೆಂಗಳೂರು ಪೋಸ್ಟ್

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ