ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ಜಿಲ್ಲೆ ರೈತರ ಬದುಕು ನಾಶ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯ ಸಿ.ಟಿ.ರವಿಗೆ ತಲೆಕೆಟ್ಟಿದೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಚಿನಕುರಳಿ ರಮೇಶ್ ತಿರುಗೇಟು ನೀಡಿದರು.
ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಅಣೆಕಟ್ಟೆಗಳು ಕೇಂದ್ರ ಸರ್ಕಾರ ಹಿಡಿತಕ್ಕೆ ಒಳಪಟ್ಟಿದೆ. ಹೀಗಾಗಿ ಬಿಜೆಪಿ ನಾಯಕರು ಪ್ರಧಾನಿ ಬಳಿ ಚರ್ಚೆ ಮಾಡುವ ಮೂಲಕ ಕಾವೇರಿ ಸಮಸ್ಯೆ ಬಗೆಹರಿಸಲಿ. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿದೆ. ಮಂಡ್ಯ ರೈತರ ಬದುಕು ನಾಶವಾಗಲಿದೆ ಎಂದು ಬೊಬ್ಬೆ ಹೊಡೆಯುವ ಮೂಲಕ ರಾಜಕೀಯ ಮಾಡಲೋರಟಿರುವುದು ಸರಿಯಲ್ಲ ಎಂದರು.
ಬಿಜೆಪಿ 26ಸಂಸದರು ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಸಂಸದರಾಗಿ ನಾಲ್ಕುವರೆ ವರ್ಷಗಳೇ ಕಳೆಯುತ್ತಿದ್ದರೂ ಕಾವೇರಿ ವಿಷಯದಲ್ಲಿ ತುಟಿ ಬಿಚ್ಚಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸುಮಲತಾ ಕಾವೇರಿ ನೀರಿನ ವಿಚಾರದಲ್ಲಿ ಹೋರಾಟ ನಡೆಸುವ ಮೂಲಕ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರೇಕೆ ಬಿಜೆಪಿಯ 26 ಸಂಸದರ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ದು ಚರ್ಚೆ ಹಾಗೂ ಹೋರಾಟ ಮಾಡಬಾರದು. ಜಿಲ್ಲೆಯ ಸ್ವಾಭಿಮಾನ ಜನರು ಮತ ಹಾಕಿ ಗೆಲ್ಲಿಸಿದ ಸುಮಲತಾ ಅವರಿಗೆ ಜಿಲ್ಲೆಯ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಜತೆಗೆ ಬಿಜೆಪಿ ಬಿ ಟೀಂ ಎನಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಸರ್ಕಾರವಿದ್ದಾಗ ಪ್ರಧಾನಿ ಜತೆ ಚರ್ಚೆ ನಡೆಸದೇ ಈಗ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸೋಲು ಅನುಭವಿಸಿದ್ದಾರೆ. ನೀವು ಚುನಾವಣೆಗೆ ನಿಂತರೂ ನಿಮ್ಮನ್ನೂ ಜಿಲ್ಲೆ ಜನರು ಮನೆಗೆ ಕಳಿಸುತ್ತಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ.ರವಿ ತಮ್ಮದೇ ಸರ್ಕಾರ ಕೇಂದ್ರದಲ್ಲಿತ್ತಾದರೂ ನೀವೇಕೆ ಪ್ರಧಾನಿ ಜತೆಗೆ ಕಾವೇರಿ ವಿಷಯ ಚರ್ಚೆ ಮಾಡಲಿಲ್ಲ. ಮಂಡ್ಯದಲ್ಲಿ ನಿಮ್ಮ ರಾಜಕೀಯ ಆಟ ಎಂದಿಗೆ ನಡೆಯದು ಎಂದು ತರಾಟೆಗೆ ತೆಗೆದುಕೊಂಡರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಕಾಂಗ್ರೆಸ್ ಮುಖಂಡರಾದ ಕೋ.ಪು.ಗುಣಶೇಖರ್, ಅಂತನಹಳ್ಳಿ ಬಸವರಾಜು ಇತರರಿದ್ದರು.




