2022 ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಪುರಸ್ಕೃತ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಆ.13ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಗರಿಕ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಸಮಿತಿ ಮುಖಂಡ ಲೋಕೇಶ್ ಚಂದಗಾಲು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯಸಾನಿಧ್ಯವಹಿಸುವರು. ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೆ.ಟಿ.ಶ್ರೀಕಂಠೇಗೌಡರನ್ನು ಸನ್ಮಾನಿಸುವರು ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಚಿಂತಕ ಪ್ರೊ.ಪಿ.ಬಿ.ನಂಜರಾಜೇ ಅರಸ್ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅಭಿನಂದನ ನುಡಿ ನುಡಿಯುವರು. ಕೆ.ಟಿ.ಶ್ರೀಕಂಠೇಗೌಡರ ಧರ್ಮಪತ್ನಿ ಬಿ.ಎಂ ವೀಣಾ ಉಪಸ್ಥಿತರಿರುವರು ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಹೆಚ್.ಟಿ. ಮಂಜು, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಎಂ. ಶ್ರೀನಿವಾಸ್, ಡಾ. ಕೆ.ಅನ್ನದಾನಿ, ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಹಾಗೂ ಎನ್. ಅಪ್ಪಾಜಿಗೌಡ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಕೀಲಾರ ಕೃಷ್ಣ, ನಾಗಪ್ಪ ಹೆಚ್.ಬಿ, ಮಂಗಲ ಯೋಗೀಶ್, ಶಿವಣ್ಣ, ಬಿ.ಸಿ.ಕೃಷ್ಣ, ಲೋಕೇಶ್ ಉಪಸ್ಥಿತರಿದ್ದರು.




