Saturday, November 21, 2026

ಪ್ರಾಯೋಗಿಕ ಆವೃತ್ತಿ

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಕೊಡುವುದು ನನ್ನ ಉದ್ದೇಶ: ಗಣಿಗ ರವಿಕುಮಾರ್

ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಕೊಡುವುದು ನನ್ನ ಉದ್ದೇಶ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೆರಗೋಡು, ಬಸರಾಳು ಹಾಗೂ ಕಸಬಾ ಹೋಬಳಿಯ ಒಟ್ಟು 163 ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ 120.96 ಕೋಟಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾದ ನಂತರ ಪ್ರತಿ ಮನೆಗೆ ಶುದ್ಧ ಕಾವೇರಿ ಕುಡಿಯುವ ನೀರು ಒದಗಿಸಲು 225 ಕೋಟಿ ರೂ.ಗಳ ಯೋಜನೆ ರೂಪಿಸಿದ್ದೆ. ಪ್ರತಿಯೊಬ್ಬರೂ ಶುದ್ಧ ಕಾವೇರಿ ನೀರು ಕುಡಿಯಬೇಕೆನ್ನುವುದು ನನ್ನ ಉದ್ದೇಶ. ಈ ಹಿನ್ನಲೆಯಲ್ಲಿ ಎರಡು ತಿಂಗಳ ಹಿಂದೆ 450 ಕೋಟಿ ರೂ‌. ವೆಚ್ಚದ ಕುಡಿಯುವ ನೀರೊದಗಿಸುವ ಯೋಜನೆಗೆ ಮದ್ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು.ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕೀಲಾರ ಗ್ರಾಮದಲ್ಲಿ 120 ಕೋಟಿ ರೂ.ವೆಚ್ಚದ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿದೆ‌. ಇದರಿಂದ ಪ್ರತಿ ಮನೆಗೂ ಇನ್ನು ಆರು ತಿಂಗಳಲ್ಲಿ ಶುದ್ಧ ಕುಡಿಯುವ ನೀರು ಸಿಗಲಿದ್ದು,ಪ್ರತಿಯೊಬ್ಬರೂ ಕಾವೇರಿ ನೀರು ಕುಡಿಯಲಿದ್ದೀರಿ ಎಂದರು.

60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ಕೀಲಾರ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 60 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು,ಕಾಮಗಾರಿ ನಡೆಯುತ್ತಿದೆ. ಉಮ್ಮಡಳ್ಳಿಯಿಂದ ಹೊಡಾಘಟ್ಟವರೆಗೆ 11 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು,ಶೀಘ್ರವಾಗಿ ಟೆಂಡರ ನಡೆಯಲಿದೆ. ಕೀಲಾರ- ಚಾಮಲಾಪುರ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ, ಕೀಲಾರ ಮತ್ತು ದೊಡ್ಡಬಾಣಸವಾಡಿ ಗ್ರಾಮದ ರಸ್ತೆ ಕಾಮಗಾರಿ ಎರಡು ಕೋಟಿ ಬಿಡುಗಡೆಯಾಗಿದ್ದು,ಶೀಘ್ರ ಟೆಂಡರ್ ನಡೆಯಲಿದೆ. ಕೀಲಾರ ದ ಕೆರೆ ಅಭಿವೃದ್ಧಿಗೆ ಎರಡು ಕೋಟಿ ಹಣ ಬಿಡುಗಡಯಾಗಿದ್ದು, ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ಹಾಗ ಉತ್ತಮ ಗುಣಮಟ್ಟದ ಲೈಟ್ ಗಳನ್ನು ಹಾಕಿ ಅಭಿವೃದ್ಧಿ ಪಡಿಸಲಾಗುವುದು.ಸೊಸೈಟಿ ಮುಂದಿನ ರಸ್ತೆಗೆ 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.

ಸೊಸೈಟಿಯಿಂದ ಪ.ಜಾತಿ ಕಾಲೋನಿಗೆ 50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಒಟ್ಟಾರೆ ಒಂದು ಕೋಟಿ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.ಬಾಣಸವಾಡಿ ಗ್ರಾಮಕ್ಕೆ ರಸ್ತೆ ಅಭಿವೃದ್ಧಿಗೆ 5 ಕೋಟಿ ಬಿಡುಗಡೆ ಮಾಡಿದ್ದು, ನಾಳೆ ಭೂಮಿ ಪೂಜೆ ನಡೆಯಲಿದೆ. ಕೀಲಾರ ಮತ್ತು ಆಲಕೆರೆ ಗ್ರಾಮದಲ್ಲಿ ಕಾವೇರಿ ನೀರಿನ ಕಾಲುವೆಗೆ 10 ಕೋಟಿ ಬಿಡುಗಡೆ ಮಾಡಲಾಗಿದೆ.ಕೀಲಾರ-ತುಂಬಕೆರೆ ಗ್ರಾಮದ ನಡುವಿನ ರಸ್ತೆಗೆ 2.50 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.

ಐತಿಹಾಸಿಕ ವೀರಭದ್ರೇಶ್ವರ ಜಾತ್ರೆ ನಡೆಯುವ ಆಲಕೆರೆ ಗ್ರಾಮದ ಅಭಿವೃದ್ಧಿಗೆ 3 ಕೋಟಿ ಹಣ ನೀಡಲಾಗಿದೆ. ಈಚಗೆರೆ- ಡಣಾಯಕನಪುರ ನಡುವಿನ ೫ ಕೋಟಿ ವೆಚ್ಚದ ರಸ್ತೆ ಮುಗಿದಿದೆ. ಮಾರ ಗೌಡನ ಹಳ್ಳಿ ಗ್ರಾಮದಲ್ಲಿ 5 ಕೋಟಿ ಕೋಟಿ ವೆಚ್ಚದ ರಸ್ತೆ ಕಾಮಗಾರಿ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನೀರಾವರಿ ನಿಗಮದ ಮೂಲಕ 280 ಕೋಟಿ ರೂ.ಹಣವನ್ನು ನನ್ನ ಕ್ಷೇತ್ರದ ವ್ಯಾಪ್ತಿಯ ಕಾಲುವೆಗಳ ಅಭಿವೃದ್ಧಿಗೆ ನೀಡಿದ್ದಾರೆ. ಈಗಾಗಲೇ ಚಾನೆಲ್ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಮುಂದೆ ನಿಮ್ಮ ಜಮೀನುಗಳಿಗೆ ಕಾವೇರಿ ನೀರು ಸಿಗಲಿದೆ. ಇನ್ನೂ 100 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದು, ಇದರಲ್ಲಿ ಎಲ್ಲಾ ಕಾಲುವೆಗಳ ಅಭಿವೃದ್ಧಿ ಮಾಡಿ ಮಾಡಲಾಗುವುದು. ಇದರಿಂದ ನಿಮ್ಮ ಹೊಲ-ಗದ್ದೆಗಳಿಗೆ ನೀರು ಸರಾಗವಾಗಿ ಹರಿಯಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ಹೆಚ್ಚು, ಅಭಿವೃದ್ಧಿ ಕಡಿಮೆ ಎನ್ನುವ ಮಾತಿತ್ತು. ಆದರೆ ಇಂದು ಸಾಗರೋಪಾದಿಯಲ್ಲಿ ನೂರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಬಸರಾಳು ಹೋಬಳಿಯಿಂದ ನಾಗಮಂಗಲವರೆಗಿನ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸೇರಿ 1100 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಯೋಜನೆ ಹಾಕಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತಗೊಳಿಸಲಾಗುವುದು ಎಂದರು.

ಪಂಚಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಕೆರಗೋಡು ಪಂಚಲಿಂಗೇಶ್ವರ ದೇವಸ್ಥಾನವನ್ನು ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ರೀತಿ ಅಭಿವೃದ್ಧಿ ಮಾಡಿ ದಿನನಿತ್ಯ ಸಾವಿರಾರು ಭಕ್ತರು ಬರುವಂತೆ ಮಾಡುವುದು ನನ್ನ ಉದ್ದೇಶವಾಗಿದೆ.ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ನನ್ನ ಸ್ವಂತ ಖರ್ಚಿನಲ್ಲಿ ಪಂಚಲಿಂಗೇಶ್ವರ ಉತ್ಸವ ಮಾಡಿಕೊಂಡು ಬಂದಿದ್ದೇನೆ.ಈಗಾಗಲೇ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ 3 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ದೇವಸ್ಥಾನದ ಪಕ್ಕದ ಕೆರೆ, ರಸ್ತೆ ಕಾಮಗಾರಿಗೆ 5 ಕೋಟಿ ರೂ.ಗಳ ಟೆಂಡರ್ ಆಗಿದ್ದು ಕೆಲಸ ಪ್ರಾರಂಭವಾಗಲಿದೆ.ಒಟ್ಟು ಈಗಾಗಲೇ 8 ಕೋಟಿ ಹಣವನ್ನು ಪಂಚಲಿಂಗೇಶ್ವರ ದೇವಸ್ಥಾನ, ರಸ್ತೆ, ಕೆರೆ ಅಭಿವೃದ್ಧಿಗೆ ನೀಡಲಾಗಿದ್ದು,ಶೀಘ್ರ ಸಮುದಾಯದ ಸ್ವಾಮೀಜಿಯನ್ನು ಕರೆಸಿ ಭೂಮಿ ಪೂಜೆ ಮಾಡುತ್ತೇನೆ. ನಂಜನಗೂಡು ದೇವಸ್ಥಾನದ ರೀತಿ ಪಂಚಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಮಾಡುವುದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಆಗಲಿದೆ ಎಂದರು.

ಮೈ ಷುಗರ್ ಅಭಿವೃದ್ಧಿ

ಮೈಷುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿ ಮಂಡ್ಯ ರೈತರ ಪರವಾಗಿ ನಿಂತಿದೆ. ಹೊಸದಾಗಿ ಬಾಯ್ಲರ್ ಹಾಕಲು 60 ಕೋಟಿ ರೂಗಳನ್ನು ನೀಡಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಮೈಸೂರ್ ಸಕ್ಕರೆ ಕಂಪನಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಕಳೆದ ಸರ್ಕಾರಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ನಿಮಗಾಗಿ ಮಾಡುತ್ತ ಬರುತ್ತಿದ್ದು, ಸದಾ ರೈತರ ಹಿತ ಕಾಯುತ್ತಿದೆ‌ ಎಂದರು.

ಕೆಂಪೇಗೌಡರ ಪ್ರತಿಮೆ ನಿರ್ಮಾಣ

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಬೃಹತ್‌ ಪ್ರತಿಮೆ ನಿರ್ಮಾಣ ಮಾಡಲು 50 ಕೋಟಿ ನಿಗದಿಯಾಗಿದ್ದು ಆ ಪ್ರತಿಮೆ ನಿರ್ಮಾಣ ಮಾಡಲು ಬೇಕಾಗಿರುವ ಕಬ್ಬಿಣವನ್ನು ಇಡೀ ಜಿಲ್ಲೆಯಾದಂತ ಮನೆ ಮನೆಯಲ್ಲಿ ತೆರಳಿ ಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಣೇಶ್ ಹೆಗಡೆ, ಗ್ರಾಮದ ಮುಖಂಡರಾದ ರುದ್ರೇಗೌಡ, ಶಿವಶಂಕರ್, ಕೀಲಾರ ಕೃಷ್ಣ, ಕೀಲಾರ ಶಿವಮೂರ್ತಿ, ವಸಂತಕುಮಾರ್, ತ್ಯಾಗರಾಜು,ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶುಭದಾಯಿನಿ, ವೀಣಾ ಶಂಕರ್, ರಾಧಾ ಮತ್ತಿತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ