ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗಿಯೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ. ಮಾಧ್ಯಮಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ರಾಜ್ಯಪಾಲರು ತಾವಾಗಿಯೇ ಬಂದಿದ್ದರು ಎಂದು ವರದಿಯಾಗಿದ್ದರಿಂದ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೂನ್ 4 ರಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಆರ್.ಸಿ.ಬಿ ವತಿಯಿಂದ ಆರ್.ಸಿ. ಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನನಗೆ ಅಂದು ಬೆಳಿಗ್ಗೆ 11.29 ನಿಮಿಷಕ್ಕೆ ಕೆ.ಎಸ್.ಸಿ.ಎ ವತಿಯಿಂದ ಶಂಕರ್ ಮತ್ತು ಜಯರಾಮ್ ಅವರು ಆಹ್ವಾನ ನೀಡಿ, ಕಾರ್ಯಕ್ರಮಕ್ಕೆ ಮನವಿ ಮಾಡಿಕೊಂಡರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು ಎಂದು ವಿವರಿಸಿದರು.
ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಚಾರವಾಗಿದೆ, ಇದು ತಪ್ಪು ಮಾಹಿತಿ. ನನ್ನ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ನೀವು ಬನ್ನಿ ಎಂದು ಆಹ್ವಾನಿಸಿದೆ. ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದರು. ಸನ್ಮಾನ ಕಾರ್ಯಕ್ರಮ 20 ನಿಮಿಷಗಳಲ್ಲಿ ಮುಗಿದುಹೋಯಿತು. ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ಈಗಾಗಲೇ ಪಾವತಿಸಲಾಗಿದೆ ಎಂದರು.




