ಶಿಕ್ಷಕರಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಸಹಪಠ್ಯ ಚಟುವಟಿಕೆಯಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ನಾಗೇಶ್ ಹೇಳಿದರು.
ಮಂಡ್ಯ ನಗರದ ಉತ್ತರ ವಲಯದ ಬಿ.ಆರ್.ಸಿ. ಕಚೇರಿಯ ಸಭಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಹಪಠ್ಯ ಚುಟವಟಿಕೆಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದರು.
ಟಿಡಬ್ಲೂಫ್ ಸಂಸ್ಥೆಯಿಂದ ಹಲವು ಅನುಕೂಲಗಳು ಶಿಕ್ಷಕರಿಗೆ ಹಾಗೂ ಅವರ ಮಕ್ಕಳಿಗೆ ಲಭಿಸಲಿವೆ. ಇದುವರೆಗೂ ಟಿಡಬ್ಲೂಫ್ ನಲ್ಲಿ ಒಟ್ಟು 360 ಕೋಟಿ ರೂ. ಹಣವಿದೆ. ಬೆಂಗಳೂರಿನ ಗುರು ಸದನವೇ ಟಿಡಬ್ಲೂಫ್ ನ ಕಾರ್ಯಸ್ಥಾನವಾಗಿದೆ. ಈ ಸದನವನ್ನು ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಒಂದು ದಿನದ ಸಂಬಳವನ್ನು ನೀಡಿ ಕಟ್ಟಿದ್ದಾರೆ ಎಂದು ಹೇಳಿದರು.

ಇಂತಹ ಟಿಡಬ್ಲೂಫ್ ನ ಸೌಲಭ್ಯವನ್ನು ಹಾಗೂ ಅದರ ಮೂಲ ಉದ್ದೇಶದ ಆಶಯವನ್ನು ಶಿಕ್ಷಕರಿಗೆ ತಿಳಿಸುವ ಅಗ್ಯವಿದೆ. ಹಾಗಾಗೀ ಈಗ ಪ್ರತಿ ಶಿಕ್ಷಕರ ಸದಸ್ಯತ್ವವನ್ನು ನೊಂದಣಿ ಮಾಡಿಸಲು ನಿರ್ಧರಿಸಲಾಗಿದ್ದು, ಪ್ರತಿ ಶಿಕ್ಷಕರು 3 ಸಾವಿರ ರೂ. ನೀಡಿ ನೊಂದಣಿ ಮಾಡಿಕೊಳ್ಳಬೇಕು. ಇದರಿಂದ ಹಲವು ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ ಎಂದರು.
ನೋದಣಿಯಾಗಿರುವ ಶಿಕ್ಷಕರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡಿದರೆ 50 ಸಾವಿರ ರೂ ಸಹಾಯ ಧನವನ್ನು ನೀಡುತ್ತಾರೆ. ತುರ್ತು ಆಸ್ಪತ್ರೆ ವೆಚ್ಚಕ್ಕೆ 50 ಸಾವಿರದಿಂದ 2 ಲಕ್ಷದವರಗೆ ಸಹಾಯ ಮಾಡುತ್ತಾರೆ. ಶಿಕ್ಷಕರು ಅಕಾಲಿಕ ಮರಣ ಹೊಂದಿದರೆ ತುರ್ತಾಗಿ 25 ಸಾವಿರ ರೂ.ವನ್ನು ನೀಡಲಾಗುತ್ತದೆ. ಇದರ ಜೊತೆಗೆ ಮುಂದಿನ ಸಭೆಯಲ್ಲಿ ಆಯುಕ್ತರೊಂದಿಗೆ ಚರ್ಚಿಸಿ ಶಿಕ್ಷಕರು ಮನೆಕಟ್ಟಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮನವಿ ಮಾಡುವುದಾಗಿ ತಿಳಿಸಿದರು.
ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಮಾತನಾಡಿ, ಕರೋನಾ ಸಂದರ್ಭದಲ್ಲಿ ಸಹಪಠ್ಯ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಸರಕಾರ ಈ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಿದೆ. ಶಿಕ್ಷಕರು ತಮ್ಮ ಬಾಲ್ಯದಲ್ಲಿ ಹಲವು ಪ್ರತಿಭೆಗಳನ್ನು ಹೊಂದಿದ್ದಾರೆ. ಅವರು ತಮ್ಮ ಆ ಪ್ರತಿಭೆಗಳನ್ನು ಈ ವೇದಿಕೆ ಮೂಲಕ ವ್ಯಕ್ತಪಡಿಸಿ, ತಾಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಬಹುಮಾನ ಗಳಿಸಿದರೆ ಮಂಡ್ಯ ತಾಲೂಕಿಗೆ ಕೀರ್ತಿ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ, ಸಮನ್ವಯಾಧಿಕಾರಿ, ಜಿ.ಆರ್.ಶಿವರಾಮು, ದೈಹಿಕ ಶಿಕ್ಷಣ ಸಂಯೋಜಕ ವಿಜಯಕುಮಾರ್, ನೋಡಲ್ ಅಧಿಕಾರಿ ಟಿ.ಡಿ.ಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಕೆ.ಸಿ.ಜಯಶೀಲ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಂಜುಮ್ ಹಾಜರಿದ್ದರು.




