Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಲೆಕ್ಷನ್‌ ಮೇಳವಾಗಿ ಮಾರ್ಪಟ್ಟ ಕುಂಭಮೇಳ

ಕೆ.ಆರ್. ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯುತ್ತಿರುವ ಮಹಾ ಕುಂಭಮೇಳ ಕಲೆಕ್ಷನ್ ಮೇಳವಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾಡಳಿತದ ವಿವಿಧ ಇಲಾಖೆಗಳ ಸಿಬ್ಬಂದಿಗಳೇ ಗೋಳಾಡುತ್ತಿದ್ದಾರೆ.

ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ. ಸಿ.ನಾರಾಯಣಗೌಡರ ತವರು ಕೆ.ಆರ್. ಪೇಟೆಯಲ್ಲಿ ನಡೆಯುತ್ತಿರುವ ಕುಂಭಮೇಳ ಯಶಸ್ವಿಗೆ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಕಳೆದ ಒಂದು ತಿಂಗಳಿಂದ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಬಿಟ್ಟು ಕುಂಭಮೇಳದ ಕೆಲಸಗಳ ಹಿಂದೆ ಬಿದ್ದಿದ್ದಾರೆ. ಆಡಳಿತ ಯಂತ್ರ ಕಳೆದೊಂದು ತಿಂಗಳಿಂದ ಸ್ಥಗಿತವಾಗಿದ್ದು, ವಿವಿಧ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳು ಕುಂಭಮೇಳಕ್ಕಾಗಿ ಟೊಂಕ ಕಟ್ಟಿ ದುಡಿಯುತ್ತಿದ್ದಾರೆ. ಸಚಿವ ಕೆ.ಸಿ. ನಾರಾಯಣಗೌಡರ ಅಣತಿಯಂತೆ ಜಿಲ್ಲಾಡಳಿತ ನಡೆಯುತ್ತಿದೆ.

ಕಲೆಕ್ಷನ್ ಮೇಳ
ಕುಂಭಮೇಳದ ಹೆಸರಿನಲ್ಲಿ ಕಲೆಕ್ಷನ್ ಮೇಳ ಜಿಲ್ಲೆಯಾದ್ಯಂತ ಜೋರಾಗಿಯೇ ನಡೆದಿದೆ. ಯಾವ ಯಾವ ಇಲಾಖೆಗಳಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಸಂಗ್ರಹಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ರಾಜ್ಯ ಸರ್ಕಾರ ಎರಡು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರೂ, ಅದು ಸಾಲುವುದಿಲ್ಲ ಎಂಬ ನೆಪವೊಡ್ಡಿ ಅಧಿಕಾರಿಗಳನ್ನು ಹಣ ಸಂಗ್ರಹಿಸಲು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹಿಂಗೆಲ್ಲಾ ಹಣ ಸಂಗ್ರಹಿಸಿ ಕುಂಭಮೇಳ ಮಾಡುವುದನ್ನು ಬಿಟ್ಟು ಸುಮ್ಮನಿದ್ದರೆ ಆಗುತ್ತಿರಲಿಲ್ಲವೇ ಎಂದು ಅಧಿಕಾರಿಗಳೇ ಗೊಣಗಾಟ ಆರಂಭಿಸಿದ್ದಾರೆ.

ಬಾರ್ ಗಳಿಂದ ಐದು ಸಾವಿರ
ಜಿಲ್ಲೆಯಾದ್ಯಂತ ಇರುವ 220 ಬಾರ್ ಅಂಡ್ ರೆಸ್ಟೋರೆಂಟ್ ಗಳಿಂದ ತಲಾ 10,000 ನೀಡುವಂತೆ ತಿಳಿಸಲಾಗಿತ್ತು. ಆದರೆ ಅಷ್ಟು ಹಣ ನೋಡುವುದು ಸಾಧ್ಯವಿಲ್ಲ ಎಂದಾಗ, ಪ್ರತಿ ಮದ್ಯದ ಅಂಗಡಿಯಿಂದ ಐದು ಸಾವಿರ ಹಣ ಸಂಗ್ರಹಿಸಲಾಗಿದೆ ಎಂದು ಮದ್ಯದ ಅಂಗಡಿಗಳ ಮೂಲಗಳಿಂದ ತಿಳಿದು ಬಂದಿದೆ.

ಆಹಾರ ಧಾನ್ಯ ಸಂಗ್ರಹ
ಹಾಗೆಯೇ ಮಂಡ್ಯ ನಗರದ ವರ್ತಕರಿಂದ ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆಯ ಸಿಬ್ಬಂದಿಗಳು ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದಾರೆ.ಪೇಟೆ ಬೀದಿ, ವಿ.ವಿ ರಸ್ತೆ, ಹೊಳಲು ರಸ್ತೆ ಸೇರಿದಂತೆ ನಗರದ ಹಲವು ಕಡೆ ವರ್ತಕರಿಂದ ಅಕ್ಕಿ,ಬೇಳೆ, ಕಡಲೆ, ಹೆಸರು ಬೇಳೆ, ಬೆಲ್ಲ, ಅಡುಗೆ ಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಕ್ವಿಂಟಾಲ್ಗಟ್ಟಲೆ ಸಂಗ್ರಹಿಸಲಾಗಿದೆ.200 ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿ ಕೊಡುವಂತೆ ಸೂಚನೆ ನೀಡಲಾಗಿತ್ತು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರ ಅಳಲು.

ಕುಂಭಮೇಳಕ್ಕೆ ಅಧಿಕಾರಿಗಳಿಂದ ಆಹಾರ ಧಾನ್ಯಗಳ ಸಂಗ್ರಹಣೆ.

ವರ್ತಕರು ಕೂಡ ಕೊಡುವುದೋ, ಬೇಡವೋ ಎಂಬ ಅಸಮಾಧಾನದಿಂದಲೇ ಆಹಾರ ಧಾನ್ಯಗಳನ್ನು ನೀಡಿದ್ದೇವೆ ಎಂದು ವರ್ತಕರು ದೂರು.


ಇದನ್ನೂ ಓದಿ: ಕುಂಭಮೇಳ: ಅ.13ರಂದು ಆಳ್ವಾಸ್ ಜಾನಪದ ಉತ್ಸವ


ಆಹಾರ ಪದಾರ್ಥಗಳ ಸಂಗ್ರಹಣೆಯಲ್ಲಿ ಭಾಗಿಯಾಗಿದ್ದ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ನಗರಸಭೆಯ ಸಿಬ್ಬಂದಿ ಎಷ್ಟು ಪ್ರಮಾಣದಲ್ಲಿ ಸಂಗ್ರಹಣೆ ಮಾಡಿದ್ದೀರಿ ಎಂಬ ಬಗ್ಗೆ ನುಡಿ ಕರ್ನಾಟಕ.ಡಾಟ್ ಕಾಮ್ ಕರೆ ಮಾಡಿದರೂ ಉತ್ತರಿಸಲು ತಿಣುಕಾಡಿದರು.ಅದರ ಮಾಹಿತಿ ಕಂದಾಯ ಇಲಾಖೆಯ ವಿಎ ಬಳಿ ಇದೆ ಎಂದು ನಗರಸಭೆ ಸಿಬ್ಬಂದಿ ನುಣುಚಿಕೊಂಡರೆ,ವಿಎಗೆ ಕೇಳಿದರೆ ನಗರಸಭೆ ಸಿಬ್ಬಂದಿಗಳೇ ಹೇಳುತ್ತಾರೆ ನನಗೆ ಗೊತ್ತಿಲ್ಲ ಎಂದರು.ಕೊನೆಗೆ ಒಂದು ಗಂಟೆ ಬಿಟ್ಟು ಹೇಳ್ತೀನಿ ಎಂದ ವಿಎ ಮೂರು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲೇ ಇಲ್ಲ.

ಕಲೆಕ್ಷನ್‌… ಕಲೆಕ್ಷನ್‌
ಹಾಗೆಯೇ ವಿವಿಧ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್ ಗಳು ಇಂತಿಷ್ಟು ಹಣವನ್ನು ಕುಂಭಮೇಳ ಖರ್ಚಿಗೆ ನೀಡುವಂತೆ ಸೂಚಿಸಲಾಗಿದೆ.ಜನಸಾಮಾನ್ಯರ, ಭಕ್ತರ ಉತ್ಸವ ಆಗಬೇಕಿದ್ದ ಮಹಾ ಕುಂಭಮೇಳ
ಬಿಜೆಪಿ ಉತ್ಸವ ಆಗಿ ಮಾರ್ಪಟ್ಟಿದೆ ಎಂದು ಜನರೇ ಮಾತನಾಡುತ್ತಿದ್ದಾರೆ.

ಒಟ್ಟಾರೆ ಕುಂಭಮೇಳ ಕಲೆಕ್ಷನ್ ಜೋರಾಗಿಯೇ ಸದ್ದು ಮಾಡುತ್ತಿದ್ದು ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಶಾಪ ಹಾಕುತ್ತಲೇ ಒಲ್ಲದ ಮನಸ್ಸಿನಿಂದ ಕುಂಭಮೇಳದ ಕಲೆಕ್ಷನ್ ಮಾಡುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ